ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ದಶಕಗಳಿಂದ ದುಡಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿ.ಟಿ.ಶ್ರೀನಿವಾಸ್ ಅವರನ್ನು ಕೆಲವು ಸ್ವಯಂ ಘೋಷಿತ ಕಾಡುಗೊಲ್ಲ ಮುಖಂಡರು ಅವಹೇಳನ ಮಾಡುವುದು ಸರಿಯಲ್ಲ ಎಂದು ‘ಕಾಡುಗೊಲ್ಲ ಯುವಕ ಮಿತ್ರ ಬಳಗ’ದ ಅರುಣ್ ಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಕಾಡುಗೊಲ್ಲ ಸಮುದಾಯದ ಹಟ್ಟಿಗಳನ್ನು ನೋಡದವರು, ಅಭಿವೃದ್ಧಿಗಾಗಿ ಹೋರಾಡದವರು ಇಂದು ಮಾತನಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮುಖಂಡರಾಗಲು ಹಾಗೂ ಹಣಕ್ಕಾಗಿ ಸಮುದಾಯದ ಮುಖಂಡರನ್ನು ಟೀಕಿಸುತ್ತಿದ್ದು, ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಪ್ರವರ್ಗ-೧ರ ರಾಜ್ಯಾಧ್ಯಕ್ಷರಾಗಿರುವ ಡಿ.ಟಿ.ಶ್ರೀನಿವಾಸ್ ಅವರು ಅಲೆಮಾರಿ ಮತ್ತು ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆ ಕಾರಣಕ್ಕೆ ಅವರು ಕಾಡುಗೊಲ್ಲರ ಎಸ್‌ಟಿ ಮೀಸಲಾತಿಗೆ ಅಡ್ಡಿ ಮಾಡುತ್ತಿದ್ದಾರೆಂದು ಆಧಾರರಹಿತವಾಗಿ ಕೆಲವರು ದೂರುತ್ತಿದ್ದಾರೆ” ಎಂದರು.
“ಹಿರಿಯೂರು ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ ಆಯ್ಕೆಯಾಗಿದ್ದಾಗ 120 ಗೊಲ್ಲರಹಟ್ಟಿಗಳ ರಸ್ತೆ ಅಭಿವೃದ್ಧಿಗೆ 30 ಕೋಟಿ ಅನುದಾನ ತಂದಿದ್ದಾರೆ. ಹಿರಿಯೂರು ತಾಲೂಕು ಒಂದರಲ್ಲಿಯೇ ಅಲೆಮಾರಿ ಯೋಜನೆಯಡಿ 4,448 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ರಾಜ್ಯಾದ್ಯಂತ ಇರುವ ನಮ್ಮ ಸಮುದಾಯದವರಿಗೆ 22,000 ಮನೆಗಳನ್ನು ಡಿ.ಟಿ ಶ್ರೀನಿವಾಸ್ ಮಂಜೂರು ಮಾಡಿಸಿದ್ದಾರೆ. ಇಂತಹವರನ್ನು ಕಾಡುಗೊಲ್ಲರ ವಿರೋಧಿಗಳು ಎನ್ನುವುದು ಸರಿಯಲ್ಲ” ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಶಿವಕುಮಾರ್, ಜೈಪ್ರಕಾಶ್ (ಬೀಡಬಾಬು) ಗುಬ್ಬಿಹಟ್ಟಿ ಮಹಲಿಂಗಯ್ಯ, ನಾಗರಾಜು(ಜೆ.ಸಿ.ಬಿ), ಶಿವರಾಜು, ರಾಮು ಕನ್ನಡಿಗ ಸತೀಶ ಪರಮೇಶ್, ಮಹಲಿಂಗಪ್ಪ ಸೇರಿದಂತೆ ಇತರರು ಇದ್ದರು.