ತೆರಿಗೆ ವಂಚಿಸುವವರ ವಿರುದ್ಧ ಸಮರ ಸಾರಿದ ಐಟಿ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಒಟ್ಟು ₹8 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಬರೋಬ್ಬರಿ ₹102 ಕೋಟಿ ಹಣ ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಆದಾಯ ತೆರಿಗೆ ವಂಚನೆ ಹಿನ್ನೆಲೆ, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿ, ಉದ್ಯಮಿ, ಚಿನ್ನಾಭರಣ ಅಂಗಡಿಗಳು, ಮಾಲೀಕರ ಮನೆ ಹಾಗೂ ಆಪ್ತರ ಮನೆ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ದಾಳಿ ನಡೆಸುತ್ತಿದ್ದಾರೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹106 ಕೋಟಿ ವೆಚ್ಚದ ಹೈಟೆಕ್ ಆಸ್ಪತ್ರೆಯಲ್ಲಿ ಸಿಬ್ಬಂದಿಯೇ ಇಲ್ಲ!
“ದೆಹಲಿ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಸುಮಾರು 55 ಕಡೆಗಳಲ್ಲಿ ಐಟಿ ಶೋಧ ನಡೆಸಿದೆ. ದಾಳಿ ವೇಳೆ, ನಡೆದ ಪರಿಶೀಲನೆಯಲ್ಲಿ ₹94 ಕೋಟಿ ನಗದು, ₹8 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣ, ದುಬಾರಿ ಬೆಲೆಯ 30 ವಾಚ್ಗಳು ದೊರೆತಿವೆ. ಸೂಕ್ತ ದಾಖಲಾತಿ ಇಲ್ಲದ, ಮಾಹಿತಿ ನೀಡದ ಕಾರಣ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಜತೆಗೆ, ನಕಲಿ ದಾಖಲಾತಿ, ಮಹತ್ವದ ದಾಖಲೆ, ಡಿಜಿಟಲ್ ಡೆಟಾವನ್ನು ವಶಕ್ಕೆ ಪಡೆಯಲಾಗಿದೆ” ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.