ಬರಗಾಲದ ಪರಿಹಾರ ಹಾಗೂ ಕಬ್ಬಿಗೆ ನ್ಯಾಯಯುತ ಬೆಲೆ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಪ್ರಸಕ್ತ ವರ್ಷದಲ್ಲಿ ತೀವ್ರ ಬರಗಾಲ ಒದಗಿದ್ದು, ಬರಗಾಲಕ್ಕೆ ತಕ್ಕಂತೆ ತಾಲೂಕಿನ ರೈತರಿಗೆ ಸೂಕ್ತವಾದಂತಹ ಬರ ಪರಿಹಾರವನ್ನು ನೀಡಬೇಕು. ಮಳೆ ಬಾರದೆ ಇರುವುದರಿಂದ ರೈತರ ಖುಷ್ಕಿ ಬೆಳೆಗೆ ಎಕರೆಗೆ ಕನಿಷ್ಠ ₹10,000 ಹಾಗೂ ನೀರಾವರಿ ಬೆಳಗ್ಗೆ ಕನಿಷ್ಠ ₹25,000ಗಳನ್ನು ಘೋಷಿಸಿ ತುರ್ತು ಬಿಡುಗಡೆಗೆ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
“ದನ ಕರುಗಳಿಗೆ ಮೇವಿನ ಅಭಾವ ಎದುರಾಗಿರುವುದರಿಂದ ಮೇವು ಬ್ಯಾಂಕ್ ಆರಂಭಿಸಬೇಕು. ಮನರೇಗಾ ಯೋಜನೆ ಅಡಿ ರೈತರ ಹೊಲಗಳಿಗೆ ಕೃಷಿ ಕಾರ್ಮಿಕರನ್ನು ಒದಗಿಸಬೇಕು. ಕೇಂದ್ರ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆಯಾಗಿ ₹3,364ರಷ್ಟು ಘೋಷಿಸಿದ್ದು, ಇದು ರೈತರಿಗೆ ಲಾಭದಾಯಕ ಬೆಲೆಯಾಗಿರುವುದಿಲ್ಲ. ಇಂತಹ ಬರಗಾಲದಲ್ಲಿ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು” ಎಂದು ಒತ್ತಾಯಿಸಿದರು.
“ಕಾರ್ಖಾನೆಗಳ ಮಾಲೀಕರು ಮತ್ತು ರೈತರ ನಡುವೆ ಮಧ್ಯಸ್ಥಿಕೆ ವಹಿಸಿ ರೈತರಿಗೆ ಕಾರ್ಖಾನೆಯವರಿಂದ ಕಬ್ಬಿನ ಸಾಗಾಣಿಕೆ ವೆಚ್ಚ, ಕಟಾವು ವೆಚ್ಚವನ್ನು, ಕಟಾವು ಪ್ರಾರಂಭವಾಗುವ ಮುಂಚೆಯೇ ರೈತರ ಸಮ್ಮುಖದಲ್ಲಿ ನಿರ್ಧರಿಸಿ ಸೂಕ್ತ ಬೆಲೆಯನ್ನು ಘೋಷಿಸಿ, ಕಟಾವು ಪ್ರಾರಂಭ ಮಾಡಬೇಕು” ಎಂದು ಕಬ್ಬು ಬೆಳೆಗಾರರು ಹಾಗೂ ತಾಲೂಕಿನ ರೈತರು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರ ಆಗ್ರಹ
ಪ್ರತಿಭಟನೆಯಲ್ಲಿ ಸಂಗಣ್ಣ ಬಾಗೇವಾಡಿ, ವಿಜಯ್ ಪೂಜಾರಿ, ಅಯ್ಯಪ್ಪ ನಿಂಗಪ್ಪ ಬಿದರಕುಂದಿ , ವೈ ಎನ್ ಬಿರಾದರ್, ಹನುಮಂತರಾಯ ಗೌಡ್, ರುದ್ರಪ್ಪ ಅಥಣಿ, ಸಂಗಪ್ಪ ಕಟ್ಟಿ, ಗದಗಯ್ಯ ಹಿರೇಮಠ್, ಶಿವು ಕಟ್ಟಿ, ಮನೋಹರ್ ನಿಡಗುಂದಿ ಇತರರು ಇದ್ದರು.