ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ದೇಶದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಅದನ್ನು ಸಂಸತ್ತು ಮಾಡಬೇಕೆಂದು ಹೇಳಿದೆ.
ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ನ್ಯಾಯಾಲಯವು ಕಾನೂನುಗಳನ್ನು ಮಾಡುವುದಿಲ್ಲ ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತದೆ. ಕೇವಲ ಸಂಸತ್ತು ಮಾತ್ರ ವಿಶೇಷ ವಿವಾಹ ಕಾಯ್ದೆಯಲ್ಲಿ ಬದಲಾವಣೆ ತರಬಹುದು. ಆದರೆ ಈ ಎಲ್‌ಜಿಬಿಟಿಕ್ಯೂ ಸಮುದಾಯ ತಮ್ಮ ಬದುಕು ಸಾಗಿಸುವಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳದ್ದು’ ಎಂದು ಸೂಚಿಸಿದರು.
‘ವಿಶೇಷ ವಿವಾಹ ಕಾಯ್ದೆ(SMA) ವಿಷಯವನ್ನು ಸಂಸತ್ತು ನಿರ್ಧರಿಸಬೇಕು. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 4 ಅನ್ನು ರದ್ದುಪಡಿಸಿದರೆ ಪ್ರಗತಿಪರ ಶಾಸನದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುವ ಅಪಾಯವೂ ಇದೆ. ಇದು ದೇಶವನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕೊಂಡೊಯ್ಯಲಿದೆ. ಭಾರತೀಯ ಉತ್ತರಾಧಿಕಾರ ಕಾಯ್ದೆ ಅಥವಾ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಒಮ್ಮೆ ಗಮನಿಸಿದರೆ ಈ ಪ್ರಕರಣವು ಶಾಸಕಾಂಗ ಕ್ಷೇತ್ರ ವ್ಯಾಪ್ತಿಗೆ ಸೇರುತ್ತದೆ ಎಂಬುದು ಸ್ಪಷ್ಟ’ ಎಂದು ಸಿಜೆಐ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಮ್ಯಾರಥಾನ್ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮೇ 11ರಂದು ತೀರ್ಪು ಕಾಯ್ದಿರಿಸಿತ್ತು.
Breaking:#Samesexmarriage #SupremeCourt #cjidychandrachud pic.twitter.com/sgRUSw8MhY
— Live Law (@LiveLawIndia) October 17, 2023
ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರಿದ್ದ ಪಂಚಪೀಠವು ಈ ತೀರ್ಪು ನೀಡಿದೆ.
ಫೋಟೋ ಕೃಪೆ: Live Law
ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೋರಿ 18 ಸಲಿಂಗಿ ದಂಪತಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಕೋರ್ಟ್ ಏಪ್ರಿಲ್ 18ರಿಂದ ಆರಂಭಿಸಿತ್ತು.
ತೀರ್ಪಿನಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳು:
- ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮವನ್ನು ಆಯ್ಕೆ ಮಾಡುವ ಅವಿಭಾಜ್ಯ ಅಂಗ
- ಮದುವೆಯು ಸ್ಥಿರ ಮತ್ತು ಬದಲಾಗದ ಸಂಸ್ಥೆ ಎಂದು ಹೇಳುವುದು ತಪ್ಪು
- ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳು ಸೇರಿದಂತೆ ಎಲ್ಲ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ.
- ಸ್ವಾತಂತ್ರ್ಯದ ಅರ್ಥವೆಂದರೆ ವ್ಯಕ್ತಿ ತಾನು ಬಯಸಿದ ಬದುಕನ್ನು ಬದುಕುವ ಸಾಮರ್ಥ್ಯವಾಗಿದೆ
- ಕ್ವೀರ್ ಸಮುದಾಯಕ್ಕೆ ಯಾವುದೇ ಸೇವೆ, ಸವಲತ್ತು ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ