ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್ ಮತ್ತು ಬಿಲ್ಡರ್ ಸಂತೋಷ್ ಅವರ ಮನೆಯಲ್ಲಿ ಕೋಟ್ಯಂತರ ನಗದು ಹಣ ಪತ್ತೆಯಾಗಿದೆ. ಈ ಐಟಿ ದಾಳಿ ಬೆನ್ನಲ್ಲೇ, ಇದೀಗ ನಗರದ ಉದ್ಯಮಿಯೊಬ್ಬರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎರಡು ಕಂಪನಿಗಳ ಎಂಡಿ ಮತ್ತು ಡೈರೆಕ್ಟರ್ ಆಗಿರುವ ಉದ್ಯಮಿ ಉಷಾ ರಾಮನಾನಿ ಮನೆ ಹಾಗೂ ಕಂಪನಿ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. 8 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಅಕ್ಟೋಬರ್ 17ರ ಬೆಳಗ್ಗೆ 5 ಗಂಟೆಗೆ ಉದ್ಯಮಿಯ ಕಸವಿನಹಳ್ಳಿ ಬಳಿ ಇರುವ ನಿವಾಸ ಸೇರಿದಂತೆ ಕಂಪನಿ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಏನಿದು ಪ್ರಕರಣ?
ಉದ್ಯಮಿ ಉಷಾ ರಾಮನಾನಿ ಎಂಬುವವರು ಆಪ್ಟ್ ಸರ್ಕ್ಯೂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಎಂಡಿ ಆಗಿದ್ದಾರೆ. ಇವರು 2011-16 ರವರೆಗೂ ಕಂಪನಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ, ಎಸ್‌ಬಿಐ ಬ್ಯಾಂಕ್‌ನಿಂದ ₹354 ಕೋಟಿ ಸಾಲ ಪಡೆದಿದ್ದರು. ಆದರೆ, ಪಡೆದ ಸಾಲವನ್ನು ಹಿಂತಿರುಗಿಸದೆ ಬ್ಯಾಂಕ್‌ಗೆ ವಂಚನೆ ಮಾಡಿದ್ದರು.
ಈ ಹಿನ್ನೆಲೆ, ಎಸ್‌ಬಿಐ 2019ರಲ್ಲಿ ಕಂಪನಿ ವಿರುದ್ಧ ಸಿಬಿಐಗೆ ದೂರು ನೀಡಿತ್ತು. ಬಳಿಕ ಈ ಪ್ರಕರಣದ ತನಿಖೆ ಸಿಬಿಐಯಿಂದ ಇಡಿಗೆ ವರ್ಗಾವಣೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹106 ಕೋಟಿ ವೆಚ್ಚದ ಹೈಟೆಕ್ ಆಸ್ಪತ್ರೆಯಲ್ಲಿ ಸಿಬ್ಬಂದಿಯೇ ಇಲ್ಲ!
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸದ್ಯ ಇಡಿ ಅಧಿಕಾರಿಗಳು ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪಿಎಮ್‌ಎಲ್‌ಎ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ.