ಕಳ್ಳರನ್ನು ಹಿಡಿದು ಜೈಲಿಗೆ ತಳ್ಳಿ ಅವರಿಗೆ ಕಳ್ಳತನ ಮಾಡಬೇಡಿ ಎಂದು ಉಪದೇಶ ನೀಡುವ ಪೊಲೀಸ್ ಇಲಾಖೆಯಲ್ಲಿ ಪೇದೆಯೊಬ್ಬ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ಹೌದು, ಕಳ್ಳರನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕಿದ್ದ ಪೊಲೀಸ್ ಪೇದೆಯೊಬ್ಬ ತಾನು ಕಳ್ಳರ ಜತೆಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದನು. ಪೊಲೀಸ್ ಪೇದೆ ಯಲ್ಲಪ್ಪ ಎಂಬುವವರನ್ನು ಸದ್ಯ ನಗರದ ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಪೇದೆ ಯಲ್ಲಪ್ಪ ಎಂಬುವವರು ಬರೋಬ್ಬರಿ ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಚಂದ್ರಾ ಲೇಔಟ್, ಚಿಕ್ಕ ಜಾಲ, ಬನಶಂಕರಿ ವ್ಯಾಪ್ತಿಯಲ್ಲಿ ಈ ಪೊಲೀಸ್ ಪೇದೆಯನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕೆಲಸದಿಂದ ಅಮಾನತು ಮಾಡಲಾಗಿತ್ತು.
ಕಳ್ಳತನ ಮಾಡಿದ ಆರೋಪದ ಮೇಲೆ ಈ ಹಿಂದೆ ಅಮಾನತು ಮಾಡಿದ್ದರೂ ಕೂಡ ಕಳ್ಳತನ ಮಾಡುವುದನ್ನು ಬಿಡದ ಪೇದೆ ಮತ್ತೆ ಕಳ್ಳತನ ಮುಂದುವರೆಸಿದ್ದಾನೆ. ಸದ್ಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬನಶಂಕರಿ ಠಾಣೆಯ ಕ್ರೈಂ ವಿಭಾಗದಲ್ಲಿ ಯಲ್ಲಪ್ಪ ಪೇದೆಯಾಗಿದ್ದಾಗ ಚಂದ್ರಾಲೇಔಟ್, ಚಿಕ್ಕ ಜಾಲದಲ್ಲಿ ಕಳ್ಳತನ ಮಾಡಿದ್ದನು. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಾಗ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿಗಳು ಪೇದೆ ಯಲ್ಲಪ್ಪನ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಲ್ಲಪ್ಪನನ್ನು ಅಮಾನತು ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೇಕಾಬಿಟ್ಟಿಯಾಗಿ ಫ್ರೀ ಟಿಕೆಟ್ ಹರಿದು ಬಿಸಾಕಿದ್ದ ಕಂಡಕ್ಟರ್ ಅಮಾನತು
ಯಲ್ಲಪ್ಪ ಕಳ್ಳತನ ಮಾಡಿದ್ದ ವಸ್ತುಗಳ ರಿಕವರಿಗಾಗಿ ಪೊಲೀಸರು ಆತನನ್ನು ಆತನ ಊರಿಗೆ ಕರೆದುಕೊಂಡು ಹೋಗುವಾಗ, ಊರಿಗೆ ಕರೆದುಕೊಂಡು ಹೋಗಬೇಡಿ, ಕರೆದುಕೊಂಡು ಹೋದರೆ ಆತ್ಮಹತ್ಯೆ ಮಾಡಿಕ್ಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.