ಸ್ಪಂದನಾ ಸಂಸ್ಥೆಯು ಬೆಳಗಾವಿ ಜಿಲ್ಲೆಯಲ್ಲಿ ʼಬಾಲ್ಯ ವಿವಾಹ ಮುಕ್ತ ದೇಶʼ ಅಭಿಯಾನವನ್ನು ಪ್ರಾರಂಭಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಸಂಸ್ಥೆ ಅಭಿಯಾನವನ್ನು ಕೈಗೊಂಡಿದೆ.
ದೇಶದ 42ಜಿಲ್ಲೆಗಳಲ್ಲಿ, ಬಾಲ್ಯ ವಿವಾಹ ಮುಕ್ತ ದೇಶ ಅಭಿಯಾನವನ್ನು ಸಂಸ್ಥೆ ಪ್ರಾರಂಭಿಸಿದೆ. ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಸ್ಪಂದನಾ ಸಂಸ್ಥೆ ಈ ಕಾರ್ಯ ಮಾಡಲಿದೆ. ಸಂಸ್ಥೆಯು ಬೆಳಗಾವಿ ಜಿಲ್ಲೆಯ 50ಗ್ರಾಮೀಣ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ತಿಳುವಳಿಕೆ ನೀಡಲಾಗುತ್ತದೆ.
ಅಭಿಯಾನದ ಭಾಗವಾಗಿ, ಮೋದಗಾ ಗ್ರಾಮದಲ್ಲಿ, ಬಾಲ್ಯ ವಿವಾಹ ಮುಕ್ತ ದೇಶ ಅಭಿಯಾನವನ್ನು ಉದ್ಘಾಟನೆ ಮಾಡಿದ್ದಾರೆ. ಜಿಲ್ಲೆಯ ಬಾಳೆಕುಂದ್ರಿ, ಮಾರಿಹಾಳ ಹಾಗೂ ಬೆಳಗಾವಿಯ ಬಾಲಕರ ಬಾಲ ಮಂದಿರ ಸೇರಿದಂತೆ ಕೆಲವು ಕಡೆಗಳಲ್ಲಿ, ಸಂಸ್ಥೆ ಕಾರ್ಯಕ್ರಮಗಳನ್ನು ಮಾಡಿದೆ.
ಮಾರಿಹಾಳದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಧೇಶಿಸಿ, ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ ಮುನ್ನೊಳಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ನಡೆಯದಂತೆ ತಡೆಯುವದು ನಮ್ಮೆಲ್ಲರ ಕರ್ತವ್ಯ. ನಮ್ಮ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಅಧ್ಯಕ್ಷರ ನೇತೃತ್ವದಲ್ಲಿ ಬಾಲ್ಯ ವಿವಾಹ ತಡೆಯುವ ಕೆಲಸ ಮಾಡುತ್ತೇವೆ, ಎಂದರು.
ಶಾಲಾ ಬಾಲಕಿ ಕಾವೇರಿ ಬಾಲ್ಯ ವಿವಾಹದ ಕುರಿತು ಮಾತನಾಡಿ, ಬಾಲ್ಯ ವಿವಾಹ ಕೆಟ್ಟ ಪದ್ಧತಿ, ಇದರಿಂದ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲುವುದು. ಸಣ್ಣ ವಯಸ್ಸಿನಲ್ಲಿ ಮದುವೆ ಮಾಡುವದರಿಂದ, ಹೆಣ್ಣು ಮಕ್ಕಳ ಆರೋಗ್ಯ ಹಾಳಾಗುತ್ತದೆ. ಗರ್ಭ ಪಾತಗಳು ಹೆಚ್ಚುತ್ತವೆ. ಇವಾಗಲೂ ಬಾಲ್ಯವಿವಾಹಗಳು ಆಗುತ್ತಿದ್ದು, ತಾವೂಗಳು ನಿಮ್ಮ ಸಮುದಾಯಗಳಲ್ಲಿ ಆಗುವ ಬಾಲ್ಯವಿವಾಹಗಳನ್ನು ತಡೆಗಟ್ಟಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಬಾಲ್ಯವಿವಾಹ ನಿಲ್ಲಿಸಬೇಕು ಎಂದು ಹೇಳಿದಳು.
ಕಾರ್ಯಕ್ರಮದಲ್ಲಿ, ಬಾಲ್ಯ ವಿವಾಹದ ಕುರಿತು ಮಹಿಳೆಯರಿಗೆ, ಪಾಲಕರಿಗೆ, ತಾಯಂದಿರಿಗೆ, ಮಕ್ಕಳಿಗೆ ಬಾಲ್ಯ ವಿವಾಹ ತಡೆಗಟ್ಟುವ ಪ್ರತಿಜ್ಞಾ ವಿಧಿ ಬೋಧಿಸಿದ, ಸ್ಪಂದನಾ ಸಂಸ್ದೆಯ ನಿರ್ದೇಶಕಿ ವಿ. ಶುಶೀಲಾ ಅವರು, ಸ್ಪಂಧನಾ ಸಂಸ್ಥೆ ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ, ʼಬಾಲ್ಯ ವಿವಾಹ ಮುಕ್ತ ದೇಶ ಅಭಿಯಾನʼವನ್ನು ಪ್ರಾರಂಭಿಸಿದ್ದು ಬಾಲ್ಯ ವಿವಾಹವನ್ನು ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಉಮಾ ಚೆನ್ನಿ, ನಮೀತಾ, ಬಾಲಕರ ಬಾಲ ಮಂದಿರದ ಸುಜಾತಾ, ಸಂಜೀವಿನಿ ಸಂಸ್ಥೆಯ ಸದಸ್ಯರು, ಸ್ಪಂದನಾ ಸಂಸ್ಥೆಯ ಸದಸ್ಯರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಭಾಗಿಯಾಗಿದ್ದರು.