ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರೈತರೊಬ್ಬರು ಕೀಟನಾಶಕ ಕುಡಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಕೊಡಿ, ಇಲ್ಲ ವಿಷ ಕೊಡಿ ಎಂದು ಬಾಪುರು ತಿಮ್ಮಪ್ಪ ಎಂಬ ರೈತ ತನ್ನ ಕೈಯಲ್ಲಿದ್ದ ಕ್ರಿಮಿನಾಶಕ ಕುಡಿದಿದ್ದಾರೆ. ಅವರನ್ನು ಕೂಡಲೇ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರಿನ ಜೆಸ್ಕಾಂ ಕಚೇರಿ ಮುಖ್ಯ ದ್ವಾರದ ಗೇಟ್ ಬಂದ್ ಮಾಡಿ, ಭತ್ತ ಕೈಯಲ್ಲಿ ಹಿಡಿದುಕೊಂಡು ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಶಾಸಕ ಶಿವರಾಜ ಪಾಟೀಲ್ ಬೆಂಬಲ ನೀಡಿದ್ದಾರೆ.
ಬೆಳೆಗಳಿಗೆ ನೀರು ಹರಿಸಲು ಸಮರ್ಪಕವಾಗಿ ವಿದ್ಯುತ್ ಇಲ್ಲದೆ, ಬೆಳೆ ಒಣಗುತ್ತಿವೆ, ಸಮಯಕ್ಕೆ ವಿದ್ಯುತ್ ಸಿಗದೆ, ನೀರು ಹರಿಸಲಾಗದೇ ಬೆಳೆಗಳು ಹಾಳಾಗಿವೆ. ಒಂದು ಕಡೆ ಕಾಲುವೆಗೆ ನೀರು ಹರಿಸಿದರೂ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಮತ್ತೊಂದೆಡೆ, ಬೋರ್ ವೆಲ್ ಮೂಲಕ ನೀರು ಹರಿಸಿಕೊಳ್ಳಲು ನೀರು ಇದ್ದರೂ, ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ, ಎಂದು ಅಧಿಕಾರಿಗಳ ವಿರುದ್ಧ ರೈತರು ಕಿಡಿ ಕಾರಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಬಂದ ಜೆಸ್ಕಾಂ ಇಇ ಚಂದ್ರಶೇಖರ ದೇಸಾಯಿ, “ಮೂರು ಗಂಟೆ ನಿರಂತರವಾಗಿ ವಿದ್ಯುತ್ ಕೊಡಲಾಗುತ್ತಿದೆ. ಐದರಿಂದ ಏಳು ಗಂಟೆ ಕಾಲ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ” ಎಂದಿದ್ದಾರೆ.
ಇದರಿಂದ ಆಕ್ರೊಶಗೊಂಡ ರೈತರು ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ. ಕೆಲವು ರೈತರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ರವೀಂದ್ರ ಜಲ್ದಾರ, ಲಕ್ಷ್ಮಣಗೌಡ ಕಡಗಂದೊಡ್ಡಿ, ನರಸಪ್ಪ ಯಾದವ, ಹುಲಿಗೆಪ್ಪ ಜಾಲಿಬೆಂಚಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು