- ನಮಗೆ ಏನು ಮಾಡಬೇಕೋ, ಸರಿ ಮಾಡ್ತೀವಿ
- ಇಬ್ರಾಹಿಂ ಫ್ರೀ ಇದ್ದಾರೆ ಮಾತನಾಡಿಕೊಳ್ಳಲಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ದಿನೇ ದಿನೇ ಹೆಚ್ಚುತ್ತಿದೆ.
ಸಿಎಂ ಇಬ್ರಾಹಿಂ ಅವರ ಹೇಳಿಕೆಗೆ ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸಿಟ್ಟಿನಿಂದಲೇ ಉತ್ತರಿಸಿದ್ದಾರೆ. “ಇಬ್ರಾಹಿಂ ಅವರೇ ಒರಿಜಿನಲ್ ಅಂತಾ ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಅಂತಾ ಬರೆದುಕೊಳ್ಳಲಿ, ಅವರು ಏನು ಬೇಕಾದ್ರು ಮಾಡ್ಕೊಳ್ಳಿ, ಅವರಿಗೆ ಬಿಟ್ಟಿದ್ದು. ದಯವಿಟ್ಟು ಇಂತಾ ಸಿಲ್ಲಿ ವಿಚಾರಕ್ಕೆ ಬರಬೇಡಿ” ಎಂದು ಪತ್ರಕರ್ತರಿಗೆ ಗದರಿಸಿದ್ದಾರೆ.
“ನಮಗೆ ಏನು ಮಾಡಬೇಕೋ, ಸರಿ ಮಾಡ್ತೀವಿ, ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ. ಅವರು ಫ್ರೀ ಇದ್ದಾರೆ ಮಾತಾಡ್ಕೊಳ್ಳಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರನ್ನು ಯಾರು ಉಚ್ಛಾಟನೆ ಮಾಡ್ತಾರೆ ನೋಡುವ್ರಂತೆ” ಎಂದರು.
ಇಬ್ರಾಹಿಂ ಹೇಳಿದ್ದೇನು?
“ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಅದರ ಅಧ್ಯಕ್ಷನಾಗಿದ್ದೇನೆ. ಇದು ನನ್ನ ಮನೆ. ಮುಂದೇನಾಗುತ್ತದೆ ಅದನ್ನು ಪರದೆಯಲ್ಲಿ ನೋಡಿ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಹೊಸ ಸಮಿತಿ ರಚನೆ ಮಾಡಿ ಎಚ್ ಡಿ ಕುಮಾರಸ್ವಾಮಿ ಅವರನ್ನೇ ಉಚ್ಛಾಟನೆ ಮಾಡಲಾಗುವುದು” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಯಾರನ್ನು ಪಕ್ಷದಿಂದ ಉಚ್ಛಾಟನೆ ಮಾಡುತ್ತಾರೆ ನೋಡೋಣ: ಎಚ್.ಡಿ ರೇವಣ್ಣ
ಇಬ್ರಾಹಿಂ ವಿರುದ್ಧ ಸಮೃದ್ಧಿ ಮಂಜುನಾಥ್ ವಾಗ್ದಾಳಿ
“ಜೆಡಿಎಸ್ ನಲ್ಲಿ 19 ಶಾಸಕರು ಗೆದ್ದರೂ ನೋವಿನಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಇಬ್ರಾಹಿಂ ಅವರ ತೆವಲುಗಳಿಗೆ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತವಲ್ಲ. ಇಬ್ರಾಹಿಂ ಅವರ ಗಮನಕ್ಕೆ ಬಾರೆದೆ ಪಕ್ಷದಲ್ಲಿ ಏನು ನಡೆದಿಲ್ಲ. ಮತ್ತೊಂದು ದಿನ ನಾನು ಬಾಯಿ ಬಿಚ್ಚಬೇಕಾಗುತ್ತದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಕಿಡಿಕಾರಿದ್ದಾರೆ.
“ಹೈಕಮಾಂಡ್ ನನಗೆ ಬಾಯಿ ಬಿಚ್ಚಲು ಅನುಮತಿ ನೀಡಿಲ್ಲ. ಅವರ ತೆವಲುಗೋಸ್ಕರ ಮಾತಬಾಡಬಾರದು. ಶಾಸಕರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಿಖಿಲ್ ಕುಮಾರಸ್ವಾಮಿ ಸೋತ ಕಾರಣ ನೈತಿಕ ಹೊಣೆ ಹೊತ್ತು ಯುವ ಘಟಕಕ್ಕೆ ರಾಜೀನಾಮೆ ಕೊಟ್ಟರು. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಹೇಳುವ ಇಬ್ರಾಹಿಂ, ಮೊದಲು ಅವರ ಆತ್ಮಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಲಿ” ಎಂದು ತಿರುಗೇಟು ನೀಡಿದ್ದಾರೆ.