ಜಾತ್ಯತೀತ ಜನತಾ ದಳ (ಜೆಡಿಎಸ್) ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಉಚ್ಚಾಟಿಸಿದ್ದಾರೆಂದು ಪಕ್ಷದ ಲೆಟರ್ ಹೆಡ್‌ನಲ್ಲಿ ಪತ್ರವೊಂದನ್ನು ಹರಿಬಿಡಲಾಗಿದೆ.
ಸಿ.ಎಂ.ಇಬ್ರಾಹಿಂ ಅವರ ನಕಲಿ ಸಹಿಯನ್ನು ಒಳಗೊಂಡಿರುವ ಈ ಪತ್ರದಲ್ಲಿ, “ಜೆಡಿಎಸ್ ಪಕ್ಷವು ದಶಕಗಳಿಂದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿದೆ. ನಮ್ಮ ಪಕ್ಷದಲ್ಲಿಎಲ್ಲ ಜಾತಿ ಧರ್ಮಗಳ ನಾಯಕರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗಿರುವುದು ಕಂಡು ಬಂದಿದ್ದು ಈ ತತ್ ಕ್ಷಣದಿಂದ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ಪಕ್ಷ ತೀರ್ಮಾನಿಸಿದೆ” ಎಂದು ಬರೆಯಲಾಗಿದೆ. ಆದರೆ ಇದನ್ನು ಸಿಎಂ ಇಬ್ರಾಹಿಂ ತಳ್ಳಿಹಾಕಿದ್ದಾರೆ.
ಈ ಕುರಿತು ತಿಳಿಯಲು ದೂರವಾಣಿ ಮೂಲಕ ಸಿ.ಎಂ.ಇಬ್ರಾಹಿಂ ಅವರನ್ನು ಸಂಪರ್ಕಿಸಿದಾಗ, “ಈ ರೀತಿಯ ಯಾವುದೇ ನಿರ್ಧಾರವನ್ನು ಪಕ್ಷವು ತೆಗೆದುಕೊಂಡಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಜರುಗಿಸಲಾಗುವುದು. ಶೀಘ್ರದಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್‌ನಲ್ಲಿ ಸಿಎಂ ಇಬ್ರಾಹಿಂ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವೆ ತಿಕ್ಕಾಟ ನಡೆಯುತ್ತಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಾರದೆಂದು ಸಿ.ಎಂ. ಇಬ್ರಾಹಿಂ ಬಣ ಅಭಿಪ್ರಾಯಪಟ್ಟಿದೆ.
“ನಮ್ಮದೇ ಒರಿಜಿನಲ್ ಜೆಡಿಎಸ್, ನಾವು ಐಎನ್‌ಡಿಐಎ ಕೂಟಕ್ಕೆ ಬೆಂಬಲ ನೀಡ್ತೀವಿ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಕುಮಾರಸ್ವಾಮಿಯವರು, “ಅವರದೇ ಒರಿಜಿನಲ್ ಅಂತಾ ಬೋರ್ಡ್ ಹಾಕಿಕೊಳ್ಳಲಿ, ಅವರನ್ನು ಬೇಡ ಅಂದಿರೋರು ಯಾರು?” ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ, “ಸಿ.ಎಂ. ಇಬ್ರಾಹಿಂ ಅವರ ಮಾತಿಗೆಲ್ಲಾ ಯಾಕ್ರಿ ಸಿರಿಯಸ್ ಆಗಿ ಹೇಳಿಕೆ ಕೊಡಬೇಕು. ಅವರ ವಿಚಾರವನ್ನು ಯಾಕೆ ಗಂಭೀರವಾಗಿ ತಗೋತಿರಾ” ಎಂದು ಪ್ರಶ್ನಿಸಿದ್ದಾರೆ.