ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಕೊರತೆಯಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಏಳು ತಾಸು ವಿದ್ಯುತ್ ನೀಡುವಂತೆ ಒತ್ತಾಯಿಸಿ ಅಕ್ಟೋಬರ್ 19ರಂದು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಲಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಮುಂಗಾರು ಮಳೆಯಿಂದ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದ್ದು, ಐದು ತಾಸು ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಲಕ್ಷಾಂತರ ರೂ. ಹೂಡಿಕೆ ಮಾಡಿ ಕೃಷಿ ಪಂಪಸೆಟ್ ನಂಬಿರುವ ರೈತರಿಗೆ ನಷ್ಟ ತುಂಬಿಕೊಡುವವರು ಯಾರು” ಎಂದು ಪ್ರಶ್ನಿಸಿದರು.
“ಕೊರತೆ ವಿದ್ಯುತ್ ಖರೀದಿ ಮಾಡಿಯಾದರೂ ಗ್ರಾಮೀಣ ರೈತರಿಗೆ ಏಳು ತಾಸು ವಿದ್ಯುತ್ ನೀಡಬೇಕು. ಗುಣಮಟ್ಟದ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಉತ್ಪಾದನೆ ಇಳಿಕೆಯಾಗಿದೆಯೆಂದು ಹೇಳುವ ಸರ್ಕಾರ ಸಂಕಷ್ಟ ಸೂತ್ರ ರೂಪಿಸುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದರು.
“ಬೆಳೆಗಳು ತೆನೆಯೊಡೆಯುವ ಹಂತದಲ್ಲಿದ್ದು, ತುರ್ತಾಗಿ ವಿದ್ಯುತ್ ಪೂರೈಸಿದರೆ ಬೆಳೆ ಉಳಿಯಲು ಸಾಧ್ಯವಾಗಿದೆ. ಮಳೆಯಿಲ್ಲ, ನೀರಾವರಿ ಯೋಜನೆಗಳ ಕೊನೆಭಾಗದ ರೈತರಿಗೆ ನೀರಿಲ್ಲ. ಈಗ ವಿದ್ಯುತ್ ಕೂಡ ಇಲ್ಲದಂತಾಗಿದೆ. ಇದರಿಂದ ಜಿಲ್ಲೆಯ ಆರ್ಥಿಕತೆ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಕೂಡಲೇ ಎಲ್ಲ ಎಸ್ಕಾಂಗಳು, ರೈತ ಸಂಘಟನೆಗಳ ಸಭೆ ಕರೆದು ಏಳು ತಾಸು ವಿದ್ಯುತ್ ನೀಡಲು ಮುಂದಾಗಬೇಕು. ಕೊರತೆ ವಿದ್ಯುತ್ ಖರೀದಿ ಮಾಡಿಯಾದರೂ ಬೆಳೆಗಳನ್ನು ಉಳಿಸಬೇಕು. ವಿದ್ಯುತ್ ಹಾಗೂ ನೀರಿನ ಕೊರೆತೆಯಿಂದ ಆಗಿರುವ ಬೆಳೆನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಏಳು ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ವಿಷ ಸೇವಿಸಿದ ರೈತ
“ಚುಕ್ಕಿ ನಂಜುಂಡಸ್ವಾಮಿಯವರು ಈ ಹಿಂದೆ ನಮ್ಮ ಸಂಘಟನೆಯಲ್ಲಿದ್ದರು. ಪ್ರಾಯೋಜಕತ್ವದಲ್ಲಿ ವಿದೇಶಕ್ಕೆ ತೆರಳಿರುವ ಲೆಕ್ಕಪತ್ರ ಕೇಳಿದರೆ ಮತ್ತೊಂದು ರೈತ ಸಂಘ ಸ್ಥಾಪಿಸಿಕೊಂಡಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ದೇವರಾಜ ನಾಯಕ, ಬೂದೆಯ್ಯಸ್ವಾಮಿ ಗಬ್ಬೂರು, ಬ್ರಹ್ಮಯ್ಯ ಆಚಾರ್ಯ ಇದ್ದರು.
ವರದಿ : ಹಫೀಜುಲ್ಲ