- ಎಚ್‌ಡಿಕೆ ಕಾರ್ಯವೈಖರಿ ನೋಡಿ ಅವರಿಗೆ ಬಿಜೆಪಿಯಲ್ಲಿ ಸ್ಥಾನಮಾನ
- ಕುಮಾರಸ್ವಾಮಿ ಅವರ ನಾಟಕವನ್ನು ಜನ ನೋಡುತ್ತಿದ್ದಾರೆ: ಕಿಡಿ
ಬಿಜೆಪಿಯವರು ಕಳೆದ ಮೂರು ತಿಂಗಳಿಂದ ಕುಮಾರಸ್ವಾಮಿ ಅವರ ಆಡಿಷನ್ ಮಾಡುತ್ತಿದೆ. ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೇಗೆ ವಾಗ್ದಾಳಿ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಮುಂದೆ ಅವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಲೇವಡಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದ್ದರೆ, ಯಾರದೋ ಮೇಲಿನ ಐಟಿ ದಾಳಿಗೆ ಕಾಂಗ್ರೆಸ್ ಜತೆ ನಂಟು ಹಾಕುತ್ತಿರುತ್ತಿರಲಿಲ್ಲ. ಇವರ ನಾಟಕವನ್ನು ಜನ ನೋಡುತ್ತಿದ್ದಾರೆ. ಅವರು ಮುಠ್ಠಾಳರಲ್ಲ. ಈಗಾಗಲೇ ಅವರು ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದ್ದು, ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿನ್ನೆ ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಹಾಗೂ ಕುಮಾರಸ್ವಾಮಿ ಅವರಿಗೆ ಇದನ್ನು ಸಾಧ್ಯವಾದರೆ ಅರ್ಥ ಮಾಡಿಕೊಳ್ಳಲಿ. ಈ ಹೇಳಿಕೆಯಲ್ಲಿ ಎಲ್ಲಾದರೂ ಒಂದು ಕಡೆ ಇದಕ್ಕೂ ಕಾಂಗ್ರೆಸ್ ಮುಖಂಡರಿಗೆ ಲಿಂಕ್ ತೋರಿಸಿದ್ದಾರಾ? ಐಟಿ ಇಲಾಖೆ ಹೇಳಿಕೆಯಲ್ಲಿ ತೆರಿಗೆ ವಂಚನೆ ಉದ್ದೇಶದಿಂದ ಕೆಲವು ಗುತ್ತಿಗೆದಾರರು, ವಾಸ್ತುಶಿಲ್ಪಿಗಳು ಹಣವನ್ನು ವೈಟ್ ಮಾತ್ರವಲ್ಲದೇ, ಡಿಜಿಟಲ್ ಮಾರ್ಗದಲ್ಲಿ ವ್ಯವಹಾರ ಮಾಡದೇ, ನಗದಿನ ರೂಪದಲ್ಲಿ ವ್ಯವಹಾರ ಮಾಡಿದ್ದಾರೆ. ಐಟಿ ಇಲಾಖೆ ಸ್ಪಷ್ಟ ಹೇಳಿಕೆ ನೀಡಿದ ನಂತರವೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಅವರಿಗೆ ಮರ್ಯಾದೆ ಇದೆಯಾ?” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎರಡು ದೇಶಗಳ ಸ್ಥಾಪನೆ- ಇಸ್ರೇಲ್ ಪ್ಯಾಲೆಸ್ತೀನಿ ಕದನಕ್ಕೆ ಕಾಯಂ ಪರಿಹಾರ
“ಬಿಜೆಪಿಯ ಒಕ್ಕಲಿಗ ಸಮುದಾಯದ ಮುಖಂಡರುಗಳ ಜತೆ ಸೇರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬವನ್ನು ಮುಗಿಸಲು ಹೊಂಚು ಹಾಕುತ್ತಿದ್ದಾರೆ. ನಾಳೆ ಏನಾದರೂ ಶಿವಕುಮಾರ್ ಅವರಿಗೆ ತೊಂದರೆ ಆದರೆ ಕುಮಾರಸ್ವಾಮಿ, ಸಿ.ಟಿ ರವಿ, ಅಶ್ವತ್ಥನಾರಾಯಣ, ಆರ್ ಅಶೋಕ್ ಅವರೇ ನೇರ ಹೊಣೆ. ಶಿವಕುಮಾರ್ ಅವರು ಡಿಸಿಎಂ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಬ್ಯ್ರಾಂಡ್ ಬೆಂಗಳೂರು ಮಾಡಲು ಹೊರಟರೆ ಅದರ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ನಿಮ್ಮ ಯೋಗ್ಯತೆಗೆ ಬೆಂಗಳೂರಿಗೆ ಸರಿಯಾದ ಅನುದಾನ ನೀಡಲಿಲ್ಲ. ಬೆಂಗಳೂರಿನಲ್ಲಿ 25 ಸಾವಿರ ರಸ್ತೆಗುಂಡಿಗಳಿವೆ ಎಂದು ಕೋರ್ಟ್‌ಗೆ ಅಫಿಡವಿಟ್ ಕೊಟ್ಟಿದ್ದಿರಿ. ಈಗ ನೀವು ಟೀಕೆ ಮಾಡುತ್ತೀರಾ?” ಎಂದು ಕಿಡಿಕಾರಿದರು.
“ನನ್ನ ಪ್ರಕಾರ ಮೋದಿ ಅವರಿಗೆ ಕರ್ನಾಟಕ ಹಾಗೂ ಕನ್ನಡಿಗರನ್ನು ಕಂಡರೆ ಸಿಟ್ಟಿದೆ. ಅದೇ ಕಾರಣಕ್ಕೆ ಸುಮಾರು 15-20 ಚಿನ್ನಾಭರಣ ಮಳಿಗೆ ರೈಡ್ ಮಾಡಿಸಿದ್ದಾರೆ. ಇವರಿಗೂ ಕಾಂಗ್ರೆಸ್ ಗೂ ಏನು ಸಂಬಂಧ? ಇವರ ಜತೆಗೆ 25 ಜೋತಿಷಿಗಳ ಮೇಲೂ ದಾಳಿ ಮಾಡಿಸಿದ್ದೀರಿ. ಅವರ ಮನೆಯಲ್ಲಿ ಏನು ಸಿಗದೇ ಇದ್ದಾಗ ಐಟಿ ಅಧಿಕಾರಿಗಳು ಜೋತಿಷ್ಯ ಕೇಳಿಕೊಂಡು ಹೋಗಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ದಿನಬೆಳಗಾದರೆ ಇವರ ಸುಳ್ಳು ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಜನರು 2024ರ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ಗೆ ಮತ್ತೊಮ್ಮೆ ಪಾಠ ಕಲಿಸಿದಾಗ ಮಾತ್ರ ಅವರು ಸುಮ್ಮನಾಗುತ್ತಾರೆ” ಎಂದರು.
“ಕುಮಾರಸ್ವಾಮಿ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿ. ನೀವು ಎನ್‌ಡಿಎ ಅನ್ನುತ್ತೀರಿ. ಅವರು ಇಂಡಿಯಾಗೆ ಬೆಂಬಲ ಎನ್ನುತ್ತಾರೆ. ನಿಮಗೆ ಮುಸಲ್ಮಾನರು, ಪರಿಶಿಷ್ಟ ಜಾತಿ, ಪಂಗಡ, ಇಂತರೆ ಸಮುದಾಯದವರು ಬೇಡವಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ನೀವೊಬ್ಬರೇ ಕಟ್ಟಿದ್ದೀರಾ? ಬೇರೆಯವರು ಕಟ್ಟಿಲ್ಲವೇ? ಚಾಮುಂಡಿ ಬೆಟ್ಟದ ಮೇಲೆ ಬಂದು ಸುಳ್ಳು ಹೇಳುತ್ತೀರಿ. ಇದನ್ನು ನೀವು ನಿಲ್ಲಿಸಬೇಕು. ಇಲ್ಲದಿದ್ದರೆ ಒಕ್ಕಲಿಗ ಸಮುದಾಯದವರೇ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ” ಎಂದು ಹೇಳಿದರು.