ನಾಫೆಡ್ ಖರೀದಿ ನಿಲ್ಲಿಸಿದ್ದರಿಂದ ಕೊಬ್ಬರಿ ಬೆಲೆ ಕುಸಿತವಾಗಿದೆ. ನಾಫೆಡ್ ಖರೀದಿ ಆರಂಭಿಸಿದರೆ ಕೊಬ್ಬರಿ ಬೆಲೆ ಏರಿಕೆಯಾಗಲಿದೆ. ಹಾಗಾಗಿ ಕಡಿಮೆ ಬೆಲೆಗೆ ಕೊಬ್ಬರಿ ಸಿಗುವಾಗ ಹೆಚ್ಚಿನ ಬೆಲೆ ನೀಡಿ ತೆಗೆದುಕೊಳ್ಳುವುದು ಯಾಕೆಂಬ ಧೋರಣೆಯಿಂದ ಕೊಬ್ಬರಿ ಬೆಲೆ ನಿರಂತರ ಕುಸಿತ ಕಂಡಿದೆ. ಕೂಡಲೇ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು.
ಕೊಬ್ಬರಿ ಬೆಲೆ ನಿರಂತರ ಕುಸಿತದಿಂದ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ತೆಂಗು ಬೆಳೆಗಾರಿಗೆ ಕೊಬ್ಬರಿ ಬೆಲೆ ಇಳಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಲ್ಪತರು ನಾಡು ಎಂದೇ ಪ್ರಸಿದ್ಧಿ ಪಡೆದಿರುವ ತುಮಕೂರು ಜಿಲ್ಲೆಯಲ್ಲಿ ತೆಂಗು ಬೆಳೆಯನ್ನೇ ಅವಲಂಬಿಸಿ ಸಾವಿರಾರು ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ರಾಜ್ಯದಲ್ಲಿ ಒಟ್ಟು 6,46,552 ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಮಳೆಯಿಲ್ಲದೆ ಬರ ಆವರಿಸಿರುವ ಸಂಕಷ್ಟದ ಕಾಲದಲ್ಲಿ ಕೊಬ್ಬರಿ ಬೆಲೆ ಕುಸಿತದಿಂದ ರೈತರನ್ನು ಬೆಂಕಿಯಿಂದ ತೆಗೆದು ಬಾಣಲಿಗೆ ಹಾಕಿದಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕೆಂಬುದು ರೈತರ ಒತ್ತಾಯವಾಗಿದೆ.
ರೈತ ಸಂಘದ ತುಮಕೂರು ಜಿಲ್ಲಾ ಸಂಚಾಲಕ ಸಿ.ಕೆ. ಪ್ರಕಾಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಆರು ತಿಂಗಳಿಂದ ಕೊಬ್ಬರಿ ಬೆಲೆ ನಿರಂತರ ಕುಸಿತ ಕಂಡಿದೆ. ಕ್ವಿಂಟಾಲ್ ಕೊಬ್ಬರಿಗೆ ₹7,000ದಿಂದ ₹8,000, ₹9,000 ಮಾತ್ರ ಇದೆ. ತೋಟಗಾರಿಕೆ ಇಲಾಖೆಯ ಅಂದಾಜಿನಂತೆ ಒಂದು ಕ್ವಿಂಟಾಲ್ ಕೊಬ್ಬರಿ ಬರಲು ₹16,000 ಖರ್ಚಾಗುತ್ತದೆ. ಆದರೆ ಅದರ ಅರ್ಧದಷ್ಟು ಅಸಲು ಹಣ ಸಿಗದೆ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರ ಕಳೆದ ಆಗಸ್ಟ್ ತಿಂಗಳವರೆಗೂ ನಾಫೆಡ್ ಮೂಲಕ ರಾಜ್ಯದಲ್ಲಿ 5.1 ಲಕ್ಷ ಕ್ವಿಂಟಾಲ್ ಕೊಬ್ಬರಿಯನ್ನು ಕ್ವಿಂಟಾಲ್‌ಗೆ ₹11750ಕ್ಕೆ ರೈತರಿಂದ ನೇರವಾಗಿ ಖರೀದಿ ಮಾಡಿತ್ತು. ಇದರ ಜೊತೆಗೆ ರಾಜ್ಯ ಸರ್ಕಾರವೂ ₹1,250 ಪೋತ್ಸಾಹಧನ ನೀಡಿದ ಮೇಲೆ ಕ್ವಿಂಟಾಲ್ ಕೊಬ್ಬರಿಗೆ ₹13,000ದಂತೆ ಒಂದು ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಲಾಗಿದೆ. ಆದರೆ ಈಗ ಖರೀದಿ ಮಾಡುವುದನ್ನು ನಿಲ್ಲಿಸಿರುವುದು ಕೊಬ್ಬರಿ ಲಾಟು ಇಟ್ಟುಕೊಂಡು ಆಸೆಗಣ್ಣಿನಿಂದ ನೋಡುತ್ತಿದ್ದ ರೈತರನ್ನು ನಡು ನೀರಿನಲ್ಲಿ ಕೈ ಬಿಟ್ಟಾಂತಾಗಿದೆ” ಎಂದರು.
“ರೈತರ ದನಿ ಜನಪ್ರತಿನಿಧಿಗಳ ಕಿವಿಗೆ ಬೀಳುತ್ತಿಲ್ಲ. ರಾಜಕೀಯ ಲಾಭಕ್ಕೆ ಬೃಹತ್ ಹೋರಾಟ ಮಾಡುವ ರಾಜಕೀಯ ಧುರೀಣರು ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ಕೇಂದ್ರ ಸರ್ಕಾರ ಖರೀದಿಸುವಂತೆ ಒತ್ತಾಯ ಮಾಡುವಲ್ಲಿ ಅವರ ದನಿ ಸೊರಗಿ ಹೋಗಿದೆ” ಎನ್ನುತ್ತಾರೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ರೈತರು.
“ರೋಗ ಬಾಧೆಯಿಂದ ತೆಂಗು ಬೆಳೆಯ ವಿಸ್ತೀರ್ಣವೇ ಕುಸಿಯುತ್ತಿದೆ. 15, 16 ವರ್ಷ ಸಾಕಿದ ಮರಗಳೇ ಇದ್ದಕ್ಕಿದ್ದಂತೆ ರೋಗಕ್ಕೆ ತುತ್ತಾಗಿ ಒಣಗುತ್ತಿವೆ. ಇಂತಹ ಹಲವು ಸಮಸ್ಯೆಯ ಸುಳಿಯಲ್ಲಿರುವ ತೆಂಗು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗದೆ ಹೋದರೆ ಚೇತರಿಸಿಕೊಳ್ಳುವುದೇ ಕಷ್ಟವಾಗಲಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ” ಎಂದು ರೈತರು ಒತ್ತಾಯಿಸಿದರು.
ತಿಪಟೂರಿನ ಟೂಡ ಶಶಿಧರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವೈಜ್ಞಾನಿಕ ಬೆಂಬಲ ಬೆಲೆಯಂತೆ ಕನಿಷ್ಠ ಒಂದು ಕ್ವಿಂಟಾಲ್‌ಗೆ ₹16,000 ಕೇಂದ್ರ ಸರ್ಕಾರ ಕೊಡಬೇಕು. ಇವರು ಕೊಡುತ್ತಿರುವುದೇ 11,750. ನಾಫೆಡ್ ಬೆಂಬಲ ಬೆಲೆಯಲ್ಲೇ ₹5,000 ಕಡಿಮೆ ಇದೆ. ಹಾಗಾಗಿ ಬೆಲೆ ನಿಗದಿ ಮಾಡುವಾಗ ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ನಾಫೆಡ್ ಖರೀದಿಸುವುದನ್ನು ಯಾವಾಗ ಬೇಕೋ ಆಗ ನಿಲ್ಲಿಸಿಬಿಡುತ್ತದೆ. ಗುಣಮಟ್ಟದ ಕೊಬ್ಬರಿ ಮಾತ್ರ ತೆಗೆದುಕೊಳ್ಳುತ್ತೇವೆಂದು ಗೋಲ್‌ಮಾಲ್ ಮಾಡುತ್ತಾರೆ. ಅದರೆ ರೈತರು ಬೆಳೆದಿರುವ ಎಲ್ಲ ಕೊಬ್ಬರಿ ತೆಗೆದುಕೊಳ್ಳುವಂತಾಗಬೇಕು” ಎಂದು ಒತ್ತಾಯಿಸಿದ್ದಾರೆ.
“ಸರ್ಕಾರ ನಿರಂತರವಾಗಿ ಕೊಬ್ಬರಿ ಖರೀದಿ ಮಾಡಬೇಕು. ಚುನಾವಣಾ ಪ್ರಚಾರಕ್ಕೆ ಬಂದಾಗ ಈಗಿನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಂಮತ್ರಿ ಅವರು ಬೆಂಬಲ ಬೆಲೆ ಕೊಡಲು ಒಪ್ಪಿಕೊಂಡು ಹೋಗಿದ್ದರು. ಆ ಮಾತು ಉಳಿಸಿಕೊಳ್ಳಬೇಕು. ಹಾಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎರಡೂ ಸೇರಿ ಕನಿಷ್ಠ ₹15,000 ಬೆಂಬಲ ಬೆಲೆ ಕೊಡಬೇಕು” ಎಂದು ಆಗ್ರಹಿಸಿದರು.
ನಾಫೆಡ್ ಖರೀದಿ ನಿಲ್ಲಿಸಿದ್ದರಿಂದ ಕೊಬ್ಬರಿ ಬೆಲೆ ಕುಸಿತವಾಗಿದೆ. ನಾಫೆಡ್ ಖರೀದಿ ಆರಂಭಿಸಿದರೆ ಕೊಬ್ಬರಿ ಬೆಲೆ ಏರಿಕೆಯಾಗಲಿದೆ. ಹಾಗಾಗಿ ಕಡಿಮೆ ಬೆಲೆಗೆ ಕೊಬ್ಬರಿ ಸಿಗುವಾಗ ಹೆಚ್ಚಿನ ಬೆಲೆ ನೀಡಿ ತೆಗೆದುಕೊಳ್ಳುವುದು ಯಾಕೆಂಬ ಧೋರಣೆಯಿಂದ ಕೊಬ್ಬರಿ ಬೆಲೆ ನಿರಂತರ ಕುಸಿತ ಕಂಡಿದೆ. ಕೂಡಲೇ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು.
ಒಟ್ಟಾರೆ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿಸುವ ಮೂಲಕ ಕೊಬ್ಬರಿಯನ್ನೇ ನಂಬಿ ಜೀವನ ಸಾಗಿಸುವವರ ಬದುಕಿಗೆ ನೆರವಾಗಬೇಕಿದೆ.
ವಿಶೇಷ ವರದಿ – ಚಂದನ್ ಡಿ ಎನ್ ತುಮಕೂರು.