ಗರ್ಭಿಣಿ ಆನೆಯೊಂದರ ಬಾಲವನ್ನು ಕತ್ತರಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಆನೆಯ ಬಾಲದಲ್ಲಿ ಗಂಭೀರ ಗಾಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆದಿದೆ.
ಬಿಡಾರದ ಭಾನುಮತಿ ಎಂಬ ಸಾಕಾನೆಯ ಬಾಲದಲ್ಲಿ ಗಾಯವಾಗಿದೆ. ಬಿಡಾರದ ಆನೆಗಳನ್ನು ಪ್ರತಿದಿನ ಮಧ್ಯಾಹ್ನ ಕಾಡಿಗೆ ಬಿಡಲಾಗುತ್ತದೆ. ಮರುದಿನ ಬೆಳಿಗ್ಗೆ ಮರಳಿ ಬಿಡಾರಕ್ಕೆ ಕರೆತರಲಾಗುತ್ತದೆ.ಅದೇ ರೀತಿ ಸೋಮವಾರ ಭಾನುಮತಿ ಆನೆಯನ್ನು ಕಾಡಿನಿಂದ ಕರೆತರಲು ಸಿಬ್ಬಂದಿಗಳು ಹೋದಾಗ, ದಾರಿಯಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿದೆ.
ಆನೆ ಮರಿ ಹಾಕಿರಬಹುದೆಂದು ಭಾವಿಸಿ ಆನೆಯ ಬಳಿ ಸಿಬ್ಬಂದಿಗಳು ತೆರಳಿದ್ದಾರೆ. ಈ ವೇಳೆ, ಆನೆಯ ಬಾಲ ಸುಮಾರು 2 ಇಂಚು ಆಳಕ್ಕೆ ಕೋಯ್ದುಕೊಂಡಿರುವುದು ಕಂಡುಬಂದಿದೆ. ನುಣುಪಾದ ಆಯುಧದಿಂದ ಕೊಯ್ದಿರುವಂತೆ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಆನೆಯನ್ನು ಬಿಡಾರಕ್ಕೆ ಕರೆತರಾಗಿದ್ದು, ವೈದ್ಯರು ಚಿಕಿತ್ಸೆ ನೀಡಿ, ಹೊಲಿಗೆ ಹಾಕಿದ್ದಾರೆ.
“ಆನೆಯ ಬಾಲ ಕತ್ತರಿಸಲು ಯತ್ನಿಸಿದವರು ಯಾರು ಎಂದು ಪತ್ತೆಹಚ್ಚಲು ಎಸಿಎಫ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇವೆ” ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.