ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರನ್ನಾಗಿ ಡಾ. ಆರತಿ ಕೃಷ್ಣ ಅವರನ್ನು ರಾಜ್ಯ ಸರ್ಕಾರ ನೇಮಕಗೊಳಿಸಿದೆ. ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಸಂಪುಟ ದರ್ಜೆ ಸಚಿವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕರ್ನಾಟಕದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿದ್ದ, ಹಿರಿಯ ಕಾಂಗ್ರೆಸ್ ನಾಯಕ ಬೇಗಾನೆ ರಾಮಯ್ಯ ಅವರ ಪುತ್ರಿಯಾಗಿರುವ ಡಾ. ಆರತಿ ಅವರು ಕಾಂಗ್ರೆಸ್ ಪಕ್ಷದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಾರೆ. ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎನ್ಆರ್ಐ ಸೆಲ್ನ ಮೊದಲ ಅಧ್ಯಕ್ಷರಾಗಿದ್ದರು.
ಅಭಿನಂದನೆ ಸಲ್ಲಿಸಿದ ಝಕರಿಯಾ ಜೋಕಟ್ಟೆ
‘ಈದಿನ.ಕಾಮ್’ನೊಂದಿಗೆ ಮಾತನಾಡಿರುವ ಅನಿವಾಸಿ ಭಾರತೀಯ ಉದ್ಯಮಿ, ಸೌದಿ ಅರೇಬಿಯಾದ ಪ್ರತಿಷ್ಠಿತ ‘ಅಲ್ ಮುಝೈನ್’ ಸಂಸ್ಥೆಯ ಆಡಳಿತ ನಿರ್ದೇಶಕ ಬಿ. ಝಕರಿಯಾ ಜೋಕಟ್ಟೆ, ‘ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆಯಾಗಿ ಡಾ. ಆರತಿ ಕೃಷ್ಣ ಅವರನ್ನು ಸರ್ಕಾರ ನೇಮಕಗೊಳಿಸಿರುವ ಮೂಲಕ ಸೂಕ್ತ ವ್ಯಕ್ತಿಯನ್ನೇ ನೇಮಕಾತಿ ಮಾಡಿದೆ’ ಎಂದು ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಝಕರಿಯಾ ಜೋಕಟ್ಟೆ
‘ರಾಜ್ಯ ಸರ್ಕಾರಕ್ಕೆ ಹಾಗೂ ಡಾ. ಆರತಿ ಕೃಷ್ಣ ಅವರಿಗೆ ಅನಿವಾಸಿ ಭಾರತೀಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆರತಿ ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸಗಳು ಆಗಲಿ ಎಂದು ಹಾರೈಸುತ್ತೇನೆ’ ಎಂದು ಬಿ. ಝಕರಿಯಾ ಜೋಕಟ್ಟೆ ಶುಭಾಶಯ ಸಲ್ಲಿಸಿದ್ದಾರೆ.
ಡಾ. ಆರತಿ ಕೃಷ್ಣ ಪರಿಚಯ
ಡಾ. ಆರತಿಕೃಷ್ಣ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಜನಿಸಿದ್ದು ಉಡುಪಿಯಲ್ಲಿ. ಇವರ ತಂದೆ ಬೇಗಾನೆ ರಾಮಯ್ಯ, ತಾಯಿ ಸೀತಾ ಬಿ. ರಾಮಯ್ಯ. ತಂದೆ ಶೃಂಗೇರಿ ಎನ್.ಆರ್. ಪುರದಲ್ಲಿ ವಕೀಲರಾಗಿದ್ದು, ಶೃಂಗೇರಿ ಶಾಸಕರಾಗಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವರಾಗಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರು ಯಾರೇ ಸಂಕಷ್ಟಕ್ಕೀಡಾದರೂ ಕೂಡಲೇ ಸ್ಪಂದಿಸಿ ಅದಕ್ಕೆ ಪರಿಹಾರ ಒದಗಿಸುವ ಮೂಲಕ ಕೋವಿಡ್ ವಾರಿಯರ್ ಆಗಿಯೂ ಡಾ. ಆರತಿ ಕೃಷ್ಣ ಅವರು ಗುರುತಿಸಿಕೊಂಡಿದ್ದರು.
ಕಷ್ಟಕ್ಕೆ ಸಿಲುಕಿದ್ದ 40 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎನ್ಆರ್ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು.
ಜಗತ್ತಿನಾದ್ಯಂತ ಇರುವ ಹಲವಾರು ದೇಶಗಳ ರಾಯಭಾರಿಗಳ ನಿರಂತರ ಸಂಪರ್ಕದಿಂದ ಚೀನಾ, ಇಟಲಿ, ಆಸ್ಟ್ರೇಲಿಯಾ. ಅಮೆರಿಕ. ಫಿಲಿಪೈನ್ಸ್, ಸ್ಪೇನ್, ಫಿನ್ಲ್ಯಾಂಡ್, ಮಲೇಷಿಯಾ, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್, ಪೋಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳು ಮೊದಲಾದ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಇತರ ರಾಷ್ಟ್ರಗಳ ಪ್ರಜೆಗಳು ಸಹಾಯಯಾಚಿಸಿ ಬಂದವರಿಗೆ ಸೂಕ್ತ ವ್ಯವಸ್ಥೆ ಮಾಡಿ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ.
ಇವರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಹ್ಯಾದ್ರಿ ಸಂಘದ ಗೌರವ ಪ್ರಶಸ್ತಿ, ಮಹಾತ್ಮಗಾಂಧಿ ಸಮ್ಮಾನ ಅವಾರ್ಡ್ ಬ್ಯಾಂಕಾಕ್ನಲ್ಲಿ, ದುಬೈ ಕನ್ನಡ ಕಾಯಕ ರತ್ನ, ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಗವರ್ನರ್ನಿಂದ ಇಂಡಿಯನ್ ಕಮ್ಯೂನಿಟಿ ಎಡ್ವಕೇಟ್ ಪ್ರಶಸ್ತಿ ಅರಸಿ ಬಂದಿವೆ. ದೇಶ-ವಿದೇಶದಲ್ಲಿ ಸಲ್ಲಿಸಿದ ಕೊಡುಗೆಯನ್ನು ಮೆಚ್ಚಿದ ಜನ ‘ಮಲೆನಾಡ ಇಂದಿರಾ’ ಬಿರುದನ್ನು ನೀಡಿದ್ದಾರೆ.