ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಸಮಾನತೆ ಬಗ್ಗೆ ಮಾತಾಡ್ತಾರೆ. ಇದಕ್ಕಾಗಿ, ಈ ಬಾರಿ ಅಲ್ಪಸಂಖ್ಯಾತರ ಮತಗಳು ಒಕ್ಕೊರಲಿನಿಂದ ಕಾಂಗ್ರೆಸ್‌ಗೆ ಬಂದವು. ಅನೇಕ ಯೋಜನೆಗಳನ್ನು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಶೈಕ್ಷಣಿಕ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ, ಕೋಮುವಾದಿ ಬಿಜೆಪಿ ಅಧಿಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಎಂಫಿಲ್, ಪಿಎಚ್‌ಡಿ ಸಂಶೋಧನಾರ್ಥಿಗಳ ಫೆಲೋಶಿಪ್ ಅನ್ನು 25 ಸಾವಿರದಿಂದ 10 ಸಾವಿರಕ್ಕೆ ಕಡಿತಗೊಳಿಸಿತು. ಅನೇಕ ಯೋಜನೆಗಳನ್ನು ರದ್ದು ಮಾಡಿತು.
ಇವಾಗ, ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ಈಗಲೂ ಬಿಜೆಪಿ ಮೋಟುಕುಗೊಳಿಸಿದ್ದ ರೀತಿಯಲ್ಲಿಯೇ ಯೋಜನೆಗಳು ಮುಂದುವರೆದಿವೆ. ರಾಜ್ಯದಲ್ಲಿ ಹೆಚ್ಚೆಂದರೆ 50ರಿಂದ 80 ಮಂದಿ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾರ್ಥಿಗಳು ಇರಬಹುದು. ಆದರೆ, ಅವರಿಗೆ ಜೆಆರ್‌ಎಫ್ ಮಾದರಿಯಲ್ಲಿ ಫೆಲೋಶಿಪ್ ಕೊಡ್ತಾ ಇದ್ದಿವಿ ಅಂತ ಜಾಹೀರಾತು ನೀಡಿರುವ ಸರ್ಕಾರ, ಮತ್ತೆ ಬಿಜೆಪಿ ಕಡಿತಗೊಳಿಸಿದ್ದಂತೆ ಕೇವಲ 10 ಸಾವಿರ ರೂ. ಫೆಲೋಶಿಪ್ ನೀಡುವುದಾಗಿ ಹೇಳಿದೆ. ಫೆಲೋಶಿಪ್ ಬಗ್ಗೆ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಇಲ್ಲ. ಕೆಲವರು 25,000 ರೂ. ಎಂದರೆ, ಇನ್ನೂ ಕೆಲವರು 10,000 ರೂ. ಎನ್ನುತ್ತಿದ್ದಾರೆ. ನೋಟಿಫಿಕೇಶನ್‌ನಲ್ಲಿ ಫೆಲೋಶಿಪ್ ಮೊತ್ತ ಎಷ್ಟು ಎಂದು ಸರಿಯಾಗಿ ತಿಳಿಸಲಾಗಿಲ್ಲ.
ಅಲ್ಪಸಂಖ್ಯಾತ ವರ್ಗದ ಮಕ್ಕಳು ಐಎಎಲ್, ಐಪಿಎಸ್, ಐಎಫ್‌ಎಸ್ – ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ತರಬೇತಿಗಾಗಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ ಮೇಲೆ ದೆಹಲಿ, ಹೈದ್ರಾಬಾದ್, ಬೆಂಗಳೂರು, ಧಾರವಾಡ ಮುಂತಾದ ಪ್ರದೇಶಗಳ ಉನ್ನತ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸಿಕೊಡಲಾಗುತ್ತಿತ್ತು.
ಆದರೆ, ಇವಾಗ ಬೆಂಗಳೂರಿನ ಹಜ್ ಭವನದಲ್ಲಿ ರೂಂ ಗಳು ಕಾಲಿ ಇವೆಯಂತೆ ಅದಕ್ಕಾಗಿ ಇಲ್ಲಿಯೇ ಕೋಚಿಂಗ್ ಕೊಡ್ತಾರಂತೆ! ಇದು ಮೂರ್ಖತನ ಅಲ್ಲವೇ? ಇಲ್ಲಿ ಕೋಚಿಂಗ್ ನೀಡುವುದನ್ನೂ ಒಂದು ಆಯ್ಕೆಯನ್ನಾಗಿ ಮಾಡಬೇಕೇ ಹೊರತು, ದೆಹಲಿ, ಹೈದ್ರಾಬಾದ್ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸುವುದನ್ನೇ ನಿಲ್ಲಿಸುವುದು ಸರಿಯಲ್ಲ. ಇದು ಅಲ್ಪಸಂಖ್ಯಾತ ವರ್ಗದ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಆಕಾಂಕ್ಷಿಗಳ ಕನಸ್ಸನ್ನು ನುಚ್ಚುನೂರು ಮಾಡುತ್ತದೆ.
ಅಲ್ಪಸಂಖ್ಯಾತ ವಿಧ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಪಡೆಯಬಾರದು, ಪಂಚರ್ ಹಾಕೋಕೆ ಹೋಗಬೇಕು ಅನ್ನೋದು ಇವರ ಆಲೋಚನೆಯಾಗಿದೆಯೇ? ಅಲ್ಪಸಂಖ್ಯಾತ ವರ್ಗದ ಮತಗಳನ್ನು ಪಡೆದವರು, ಅವರ ಶೈಕ್ಷಣಿಕ ವಿಷಯ ಬಂದಾಗ ಜಾಣ ಮೌನಕ್ಕೆ ಜಾರುತ್ತಾರೆ. ಕೂಡಲೇ ಜೆಆರ್‌ಎಫ್ ಮಾದರಿಯಲ್ಲಿ 30,000 ರೂ. ಫೆಲೋಶಿಪ್ ನಿಗದಿ ಮಾಡಬೇಕು.
– ಎಂ.ಕೆ ಸಾಹೇಬ್, ಕೊಪ್ಪಳ