ರಾಜ್ಯ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್‌ನ 5 ಪಂದ್ಯಗಳು ನಡೆಯಲಿವೆ. ಈ ಪೈಕಿ ನಾಲ್ಕು ಪಂದ್ಯಗಳಿಗೆ ಅ.19ರವರೆಗೆ ಟಿಕೆಟ್ ಮಾರಾಟ ಇರಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಷ್ ಹ್ಯಾಜಲ್‌ವುಡ್ ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದು, ಇದು ಪಂದ್ಯ ವೀಕ್ಷಣೆಗೆ ಬೆಂಗಳೂರಿಗರ ವಿಶೇಷ ಆಕರ್ಷಣೆಯಾಗಿದೆ.
ಸದ್ಯ ಆಸ್ಟ್ರೇಲಿಯಾ–ಪಾಕಿಸ್ತಾನ (ಅ.20), ಇಂಗ್ಲೆಂಡ್–ಶ್ರೀಲಂಕಾ (ಅ.26), ನ್ಯೂಜಿಲೆಂಡ್–ಪಾಕಿಸ್ತಾನ (ನ.4) ಹಾಗೂ ನ್ಯೂಜಿಲೆಂಡ್–ಶ್ರೀಲಂಕಾ(ನ.9) ಪಂದ್ಯಗಳ ಟಿಕೆಟ್ ಮಾರಾಟ ಆರಂಭವಾಗಿದೆ. ಇನ್ನು ಭಾರತ–ನೆದರ್ಲೆಂಡ್ಸ್ (ನ.12) ಪಂದ್ಯದ ಟಿಕೆಟ್‌ಗಳ ಮಾರಾಟ ಆರಂಭವಾಗಿಲ್ಲ.
ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ಪಂದ್ಯ ಅ.20ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆ, ಮಂಗಳವಾರದಿಂದ ಕ್ರಿಕೆಟ್ ಪ್ರೇಮಿಗಳಿಗಾಗಿ ಟಿಕೆಟ್ ಮಾರಾಟ ಆರಂಭವಾಗಿತ್ತು. ಹಲವು ಜನ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡಲು ಮುಂದಾಗಿದ್ದರು.
ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬುಧವಾರ ಮತ್ತು ಗುರುವಾರ ಕ್ರೀಡಾಂಗಣದ ಗೇಟ್ ಸಂಖ್ಯೆ 2 ಮತ್ತು 4 (ಕಬ್ಬನ್ ರಸ್ತೆ) ಹಾಗೂ ಗೇಟ್ ಸಂಖ್ಯೆ 16, 18ರಲ್ಲಿ (ಕ್ವೀನ್ಸ್ ರಸ್ತೆ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಟಿಕೆಟ್ ಖರೀದಿಗೆ ಅವಕಾಶವಿರಲಿದೆ.
ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮಾತ್ರ ಲಭ್ಯವಿರಲಿದ್ದು, ಒಬ್ಬರಿಗೆ ಗರಿಷ್ಠ 2 ಟಿಕೆಟ್ ಮಾತ್ರ ನೀಡಲಾಗುತ್ತಿದೆ. ಕನಿಷ್ಠ ₹750 ರಿಂದ ಗರಿಷ್ಠ ₹25 ಸಾವಿರದವರೆಗೆ ಟಿಕೆಟ್ ದರ ನಿಗದಿಯಾಗಿದೆ.
ಮಂಗಳವಾರದಿಂದ ನಾಲ್ಕು ಪಂದ್ಯಗಳಿಗೆ ಟಿಕೆಟ್ ಮಾರಾಟ ಆರಂಭವಾದ ಹಿನ್ನೆಲೆ, ಹಲವು ಜನ ರಜೆ ಹಾಕಿ ಟಿಕೆಟ್ ಖರೀದಿಗೆ ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಜನ ಟಿಕೆಟ್ ಖರೀದಿ ಮಾಡುತ್ತಿದ್ದರು. ಇದೇ ವೇಳೆ, ಸರ್ವರ್ ನಿಧಾನಗತಿಯಲ್ಲಿ ಇದ್ದ ಕಾರಣ ಜನರು ಸಾಲಿನಲ್ಲಿ ನಿಂತು ಬಹಳ ಹೊತ್ತು ಕಾಯಬೇಕಾಯಿತು. ಇನ್ನು ಕಡಿಮೆ ಮೊತ್ತದ ಟಿಕೆಟ್‌ಗಳು ಬಹು ಬೇಗನೆ ಖಾಲಿಯಾದವು. ಹಾಗಾಗಿ, ಹಲವು ಅಭಿಮಾನಿಗಳು ಬರಿಗೈಯಲ್ಲಿ ವಾಪಸ್ ಮರಳಬೇಕಾಯಿತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೋರಮಂಗಲದ ಪಬ್‌ವೊಂದರಲ್ಲಿ ಬೆಂಕಿ ಅವಘಡ
ನವೆಂಬರ್ 12ರಂದು ನಡೆಯಲಿರುವ ಭಾರತ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯದ ಟಿಕೆಟ್ ಮಾರಾಟವಾಗುತ್ತಿದೆಯೆಂಬ ವದಂತಿ ನಂಬಿ ಹಲವು ಜನ ಕಚೇರಿಗಳಿಗೆ ರಜೆ ಹಾಕಿ ಟಿಕೆಟ್ ಖರೀದಿ ಮಾಡಲು ಬಂದಿದ್ದರು. ಈ ವೇಳೆ, ಭಾರತ-ನೆದರ್ಲೆಂಡ್ಸ್ ಪಂದ್ಯ ಟಿಕೆಟ್ ನೀಡುವ ಪ್ರಕ್ರಿಯೆ ಇನ್ನು ಆರಂಭವಾಗಿಲ್ಲ ಎಂಬುದನ್ನು ಅರಿತು ಪೆಚ್ಚು ಮೊರೆ ಹಾಕಿ ಮನೆ ಕಡೆ ನಡೆದರು.