ತುಂಗಭದ್ರ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಹರಿಸಲು ಆಗ್ರಹಿಸಿ ರಾಯಚೂರಿನಲ್ಲಿ ಅನಿರ್ದಿಷ್ಠಾವಧಿ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನಾ ಸ್ಥಳಕ್ಕೆ ಗ್ರಾಮೀಣ ಶಾಸಕ ದದ್ದಲ ಬಸನಗೌಡ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹಾಗೂ ಎಸ್‌ಪಿ ನಿಖಿಲ್ ಭೇಟಿ ನೀಡಿದ್ದು, ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಶಾಸಕ ದದ್ದಲ್ ಬಸನಗೌಡ ಮಾತನಾಡಲು ಮುಂದಾದಾಗ ಹೋರಾಟ ಸಮಿತಿ ಕಾರ್ಯದರ್ಶಿ ಸಿದ್ದನಗೌಡ ನೆಲಹಾಳ ವಿರೋಧ ವ್ಯಕ್ತಪಡಿಸಿದರು. ಪರಿಣಾಮ ಮಾತಿನ ಚಕಮಕಿ ನಡೆಯಿತು. ನಾಲೆಯ 104 ಮೈಲ್‌ನ ಗೇಜ್ ನಿರ್ವಹಣೆಯಾಗದೇ ನೀರು ಬಾರದೇ ಇರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿ, “ಕಾಲುವೆ ಕೊನೆಭಾಗಕ್ಕೆ ನೀರು ಬರುತ್ತಿಲ್ಲ. ಅಧಿಕಾರಿಗಳು ರೈತರ ತಾಳ್ಮೆ ಪರೀಕ್ಷೆ ಮಾಡಬಾರದು. ಮೇಲ್ಬಾಗದಲ್ಲಿ ವ್ಯರ್ಥವಾಗಿ ನೀರು ಹರಿಯುತ್ತಿದೆ. ಹೆಚ್ಚುವರಿ ನೀರು ಹರಿಯುವುದನ್ನು ತಡೆಯದೇ ಹೋದರೆ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ. ಗುರುವಾರ ಬೆಳಿಗ್ಗೆವರೆಗೆ ನೀರು ಬಾರದೇ ಹೋದಲ್ಲಿ ಪುನಃ ರಸ್ತೆ ತಡೆ ಮುಂದುವರೆಸುತ್ತೇವೆ” ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, “ಕಾಲುವೆ ಕೊನೆಭಾಗಕ್ಕೆ ನೀರು ಒದಗಿಸಲು ಸಾಧ್ಯವಾಗಿಲ್ಲ. ರೈತರ ಪರಸ್ಥಿತಿಯನ್ನು ಜಿಲ್ಲಾಡಳಿತ ಅರ್ಥ ಮಾಡಿಕೊಳ್ಳಬೇಕು. ಕಾಲುವೆ ವ್ಯಾಪ್ತಿಯಲ್ಲಿ ಸಂಚರಿಸಿ ನೀರು ಹರಿಸುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ರಾತ್ರಿವರೆಗೆ ಕಾಯೋಣ. ನಾಳೆ ಬೆಳಿಗ್ಗೆ ಗೇಜ್ ನೀರು ಬಾರದೇ ಹೋದರೆ ಹೋರಾಟ ಮುಂದುವರೆಸಲಾಗುತ್ತದೆ” ಎಂದರು.
ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮಾತನಾಡಿ, “ಕೊನೆಭಾಗಕ್ಕೆ ನೀರು ಹರಿಸುವ ಕುರಿತು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ನೀರಾವರಿ ನಿಗಮದ ವ್ಯವಸ್ಥಾಪಕರು, ಪ್ರಾದೇಶಿಕ ಆಯುಕ್ತರಿಗೂ ಮಾಹಿತಿ ನೀಡಲಾಗಿದೆ. ಕಾಲುವೆ ವ್ಯಾಪ್ತಿಯಲ್ಲಿ ನೀರು ನಿರ್ವಹಣೆ ಸಾಧ್ಯವಾಗದೇ ಇರುವದು ಸಮಸ್ಯೆಯಾಗಿದೆ. ರೈತರು ತಾಳ್ಮೆಯಿಂದ ಸಹಕರಿಸಲು ಮನವಿ ಮಾಡಿದರು.ಈಗಲೂ ಕಾಲುವೆ ವ್ಯಾಪ್ತಿಯಲ್ಲಿ ವೀಕ್ಷಣೆ ಮಾಡಲಾಗುತ್ತದೆ. ನೀರು ತರಲು ಪ್ರಯತ್ನಿಸುತ್ತೇವೆ” ಎಂದು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾತನಾಡಿ, “ಕೊನೆಭಾಗಕ್ಕೆ ನೀರು ತರಲು ಪ್ರಾಮಾಣಕ ಪ್ರಯತ್ನ ಮಾಡಲಾಗುತ್ತಿದೆ. ರೈತರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಕಾಲುವೆ ವ್ಯಾಪ್ತಿಯಲ್ಲಿ ಮೈಲ್ 47ರವರಗೆ ಪರಿಶೀಲಿಸಲಾಗುತ್ತದೆ. ಗೇಜ್ ಹೆಚ್ಚಿಸಲು ಸಮಯಬೇಕು. ಅದಕ್ಕಾಗಿ ರೈತರು ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಶರಣಪ್ಪ ಕಲ್ಮಲಾ, ಅಮರೇಶ ಪಾಟೀಲ್, ಸಂಗಮೇಶ ಸೇರಿದಂತೆ ೧೦೪ ಕೆಳಭಾಗದ ರೈತರು, ಮುಖಂಡರುಗಳು ಭಾಗವಹಿಸಿದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು