ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದ ದಸರಾ ಸಂತೆ ವ್ಯಾಪಾರ ವಿಚಾರದಲ್ಲಿ ಹಿಂದು ವ್ಯಾಪಾರಸ್ಥರು ನಡೆಸುವ ಅಂಗಡಿಗಳಿಗೆ ಕೇಸರಿ ಪತಾಕೆಯನ್ನು ಹಾಕಿದ್ದ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಕೋಮು ಸಾಮರಸ್ಯಕ್ಕೆ ಧಕ್ಕೆಗೆ ಯತ್ನ ಆರೋಪದ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿಪೊಲೀಸ್ ಠಾಣೆಯಲ್ಲಿ ಎಫ್‌ಆಐರ್ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ, ಅ.15,2023ರಂದು ದಕ್ಷಿಣ ಕನ್ನಡ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನ ಸಹ ಕಾರ್ಯದರ್ಶಿಯಾದ ಶರಣ್ ಪಂಪ್‌ವೆಲ್, ತನ್ನ ಬೆಂಬಲಿಗರೊಂದಿಗೆ ಬಂದು ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿರುವ ಹಿಂದೂ ವ್ಯಕ್ತಿಗಳ ಮಾರಾಟದ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ಹಾಕಿ, ಹಿಂದೂಗಳು ಹಿಂದೂ ಸಮುದಾಯದ ವ್ಯಾಪಾರಸ್ಥರ ಅಂಗಡಿಗಳಲ್ಲಿ ವ್ಯವಹಾರ ಮಾಡುವಂತೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇದು ಭಿನ್ನಕೋಮಿನ ನಡುವೆ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು, ಶರಣ್ ಪಂಪ್‌ವೆಲ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಶಾಂತಿ-ಸಾಮರಸ್ಯವನ್ನು ಹದಗೆಡಿಸುವ ಕೃತ್ಯಗಳಿಗೆ ವಿಧಿಸಲಾಗುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ ಪ್ರಕಾರ ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಹಿಂದು-ಮುಸ್ಲಿಂ ಗಲಭೆಗೆ ಯತ್ನಿಸುತ್ತಿರುವ ಶರಣ್ ಪಂಪ್‌ವೆಲ್ ಮೇಲೆ ಕ್ರಮಕ್ಕೆ ಸಚಿವರಿಗೆ ಮನವಿ
ಈ ಸೆಕ್ಷನ್ ಪ್ರಕಾರ ಆರೋಪ ಸಾಬೀತಾದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಶರಣ್ ಪಂಪ್‌ವೆಲ್ ಕ್ರಮಕ್ಕೆ ಆಗ್ರಹಿಸಿದ್ದ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ
ಇಂದು(ಅ.18) ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿದ್ದ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗವು, ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಹಿಂದು ವ್ಯಾಪಾರಸ್ಥರ ಮಳಿಗೆಗಳಿಗೆ ಬಲವಂತದಿಂದ ಕೇಸರಿ ಬಾವುಟ ಕಟ್ಟಿ, ಮುಸ್ಲಿಂ ವ್ಯಾಪಾರಿಗಳ ಮಳಿಗೆಗಳಲ್ಲಿ ಹಿಂದುಗಳು ವ್ಯಾಪಾರ ನಡೆಸಬಾರದು ಎಂದು ಬಹಿರಂಗವಾಗಿ ಕರೆ ನೀಡಿದ್ದ ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್ ಮತ್ತು ಸಹಚರರನ್ನು ಕೋಮು ಪ್ರಚೋದಕ ಸೆಕ್ಷನ್‌ಗಳಡಿ ಬಂಧಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.