- ‘ಬಿಜೆಪಿಯಲ್ಲಿ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ’
- ‘ಪಕ್ಷ ಬಿಡುವ ಬಗ್ಗೆ ನನ್ನಜೊತೆ ಕಾಲ್ ಮಾಡಿ ಮಾತನಾಡಿದ್ದಾರೆ’
ಬಿಜೆಪಿಯಲ್ಲಿ ಸಮರ್ಥ ನಾಯಕತ್ವದ ಕೊರತೆಯಿಂದ ಪಕ್ಷದ ಕೆಲ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಪಕ್ಷ ತೊರೆಯುವ ಯೋಚನೆ ಮಾಡಿದ್ದಾರೆ. ಈ ಬಗ್ಗೆ ಕೆಲವರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಬಗ್ಗೆ ತಿಳಿಸಿದ್ದಾರೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮವರಿಗೆ ನಾನು ಬೇಡ ಅನಿಸುತ್ತದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ” ಎಂದರು.
“ಹೊನ್ನಾಳಿ– ನ್ಯಾಮತಿ ತಾಲ್ಲೂಕು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿದ್ದೇನೆ. ಇದನ್ನೇ ತಪ್ಪಾಗಿ ಬಿಂಬಿಸಲಾಗಿದೆ. ಪಕ್ಷದ ಹಿರಿಯರನ್ನು ಕಡೆಗಣಿಸಿರುವ ನೋವು ಇದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ” ಎಂದು ತಿಳಿಸಿದರು.
ಹೋಗುವವರು ಹೋಗಲಿ ಎಂಬ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, “ಸಂಸದ ಸ್ಥಾನಕ್ಕೆ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿಲ್ಲ. ಪಕ್ಷದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗಿಂತ ನಾನು ಸೀನಿಯರ್. ಅವರಿಗಿಂತ ಅನುಭವವಿದೆ. ಹೋರಾಟದಲ್ಲಿ ಎರಡು ಬಾರಿ ಜೈಲು ಸೇರಿದ್ದೇನೆ. ಅವರ ತಂದೆ ಮಲ್ಲಿಕಾರ್ಜುನಪ್ಪ ಅವರ ಕಾಲದಲ್ಲಿ ಮೂರು ಹಾಗೂ ಸಿದ್ದೇಶ್ವರ ಅವರ ನಾಲ್ಕು ಚುನಾವಣೆ ಮಾಡಿದ್ದೇನೆ. ವಯಸ್ಸಿನಲ್ಲಿ ಅವರು ಹಿರಿಯರಷ್ಟೇ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ
“2019ರಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರಿಂದ ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯದ ಮೇರೆಗೆ ಈ ಬಾರಿಯ ಚುನಾವಣೆಗೆ ಆಕಾಂಕ್ಷಿ ಎಂದು ಹೇಳಿದ್ದೇನೆ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
“ಪಕ್ಷದಲ್ಲಿ ಹಿರಿಯರಾದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ರಾಜಕೀಯವಾಗಿ ಮುಗಿಸಿದರು. ದಾವಣಗೆರೆಯಲ್ಲಿ ಯಾರಾದರೂ ಸಂಸದರ ಸ್ಥಾನಕ್ಕೆ ಟಿಕೆಟ್ ಕೇಳಿದರೆ ಸಾಕು, ಅವರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.