ವಿಷಪೂರಿತ ಆಹಾರ ಸೇವಿಸಿದ ನಂತರ 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ(ಎಎಂಯು) ನಡೆದಿದೆ.
ವಿವಿಯಲ್ಲಿ ಮಂಗಳವಾರ(ಅಕ್ಟೋಬರ್ 18) ರಾತ್ರಿ ಎಎಂಯು ಸಂಸ್ಥಾಪಕ ಸರ್ ಸೈಯದ್ ಅಹಮದ್ ಖಾನ್ ದಿನದ ಪ್ರಯುಕ್ತ ಬೇಗಂ ಅಝೀಝನ್ ನಿಸಾ ಹಾಲ್‌ನಲ್ಲಿ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು. ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ ನಂತರ ವಿದ್ಯಾರ್ಥಿನಿಯರು ಅಸ್ವಸ್ಥರಾದರು. ವಿದ್ಯಾರ್ಥಿನಿಯರನ್ನು ಅಲಿಗಢ ಜೆಎನ್ ವೈದ್ಯಕೀಯ ಕಾಲೇಜು ಮತ್ತು ಎಎಂಯು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಕಾರಣವಾದ ಘಟನೆಯ ಬಗ್ಗೆ ತನಿಖೆ ನಡೆಸಲು ತ್ರಿಸದಸ್ಯ ಸಮಿತಿಗೆ ಸೂಚಿಸಲಾಗಿದೆ ಎಂದು ವಿವಿಯ ಅಧಿಕಾರಿ ಮೊಹಮ್ಮದ್ ವಾಸಿಂ ಅಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಎಸ್ಪಿ ನಾಯಕ ಆಜಂ ಖಾನ್, ಪತ್ನಿ, ಪುತ್ರಗೆ 7 ವರ್ಷ ಜೈಲು
“ಎಎಂಯು ಸಂಸ್ಥಾಪಕರ ಜನ್ಮದಿನದ ಪ್ರಯುಕ್ತ ಮಂಗಳವಾರ ರಾತ್ರಿ ವಿವಿಯ ಬೇಗಂ ಅಝೀಝನ್ ನಿಸಾ ಕೊಠಡಿಯಲ್ಲಿ ತಂಗಿರುವ ಬಾಲಕಿಯರಿಗಾಗಿ ವಿಶೇಷ ಭೋಜನವನ್ನು ಆಯೋಜಿಸಲಾಗಿತ್ತು. ಈ ವಸತಿ ಕೊಠಡಿಯಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಹಾರ ಸೇವಿಸಿದ ನಂತರ ಹೊಟ್ಟೆನೋವು ಮತ್ತು ವಾಂತಿಯಾಗಿರುವ ಬಗ್ಗೆ ದೂರು ನೀಡಿದ್ದಾರೆ” ಎಂದು ಎಎಂಯು ಅಧಿಕಾರಿ ತಿಳಿಸಿದ್ದಾರೆ.
“ವಿದ್ಯಾರ್ಥಿನಿಯರನ್ನು ಅಲಿಘಢದ ಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ವಿಪರೀತ ಅಸ್ವಸ್ಥರಾದವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು” ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಗಂ ಅಝೀಝನ್ ನಿಸಾ ಹಾಲ್ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿ ನಿಲಯವಾಗಿದ್ದು, ಈ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 1,500 ವಿದ್ಯಾರ್ಥಿಗಳಿಗೆ ವಾಸ್ತವ್ಯ ಕಲ್ಪಿಸಲಾಗಿದೆ.