ಕಲಿಕೆ ಮೌಲ್ಯವನ್ನು ಕಳೆದುಕೊಂಡಾಗ ರಾಜ್ಯ ಶಿಕ್ಷಣ ಸಮಿತಿ ಏನನ್ನು ಮಾಡಬಹುದು?

Date:

Advertisements
ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ‘ರಾಜ್ಯ ಶಿಕ್ಷಣ ಸಮಿತಿ’ಯು ರಾಜ್ಯದ ಶೈಕ್ಷಣಿಕ ಜಗತ್ತಿನ ರಚನಾತ್ಮಕ ಬದಲಾವಣೆಗೆ ಪ್ರಯತ್ನಿಸಬೇಕಾಗಿದೆ. ಅದರಲ್ಲಿಯೂ ಸಾರ್ವಜನಿಕ, ಶೈಕ್ಷಣಿಕ ವ್ಯವಸ್ಥೆಯ ಕರಗುವಿಕೆಯನ್ನು ತಡೆಯುವ ಮತ್ತು ಸಮಸಮಾಜವನ್ನು ರೂಪಿಸುವ ದೃಷ್ಟಿಕೋನದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ದಿಕ್ಕಿನಲ್ಲಿ ಗಂಭೀರವಾಗಿ ಚರ್ಚೆ ಮಾಡಬೇಕಾಗಿದೆ.

ಕಾನೂನು ಪದವಿ ಪಡೆದ ಒಬ್ಬ ವಿದ್ಯಾರ್ಥಿಯು ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಲು ಉತ್ಸುಕನಾಗಿದ್ದ. ಆ ವಿದ್ಯಾರ್ಥಿಯು ನಂತರ ತನ್ನ ನಿರ್ಧಾರವನ್ನು ಬದಲಿಸಿ, ಸ್ನಾತಕೋತ್ತರ ಪದವಿಯನ್ನು ಮಾಡಿ, ಈಗ ನಮ್ಮ ವಿಭಾಗದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದಾನೆ. ಏಕೆ ನೀವು ವಕೀಲ ವೃತ್ತಿಯನ್ನು ಪ್ರಾರಂಭಿಸಲಿಲ್ಲ? ಎಂದು ಕೇಳಿದಾಗ, ಎಲ್‌ಎಲ್‌ಬಿ ಪದವಿಯು ನನಗೆ ಮೂಲಭೂತ ವಿಷಯದ ಮೇಲೆ ನನಗೆ ಸಾಕಷ್ಟು ಹಿಡಿತವನ್ನು ನೀಡಲಿಲ್ಲ. ನಾನು ಮಾಸ್ಟರ್ಸ್/ಸ್ನಾತಕ್ತೋತರ ಕೋರ್ಸ್ ನಿಂದ ಹೆಚ್ಚಿನದನ್ನು ಗಳಿಸುತ್ತೇನೆ ಎಂದು ಭಾವಿಸಿ, ಇನ್ನೊಂದು ಉನ್ನತ ಪದವಿಯನ್ನು ಪಡೆಯಲು ನಿರ್ಧಾರ ಮಾಡಿದೆ. ಸ್ನಾತಕೋತ್ತರ ಪದವಿಯು ನನಗೆ ಉದ್ಯೋಗವನ್ನು ನೀಡುತ್ತದೆ ಎಂದು ಭಾವಿಸಿದ್ದೆ, ಅಲ್ಲಿನ ಸ್ಪರ್ಧಾತ್ಮಕತೆ, ಅಲ್ಲಿ ಉದ್ಯೋಗಕ್ಕಾಗಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನಿಸಿದೆ. ಅದರಲ್ಲಿಯೂ ಗುಣಾತ್ಮಕ ಉದ್ಯೋಗ ದೊರಕುವುದು ಕಷ್ಟ ಎಂದು ತಿಳಿದು, ಪಿಎಚ್.ಡಿ ಅಧ್ಯಯನಕ್ಕೆ ನೋಂದಾಯಿಸಿದೆ ಎಂದು ಆ ವಿದ್ಯಾರ್ಥಿ ಹೇಳಿದರು.

ಆ ವಿದ್ಯಾರ್ಥಿಗೆ ಪದವಿ ಮತ್ತು ಸ್ನಾತಕೋತ್ತರ, ಈ ಎರಡು ಪದವಿಗಳಲ್ಲಿ ಪಡೆದ ಜ್ಞಾನ ಉದ್ಯೋಗಕ್ಕೆ ಸೇರಲು ಅಥವಾ ಉದ್ಯೋಗ ಕೌಶಲ್ಯ ನೀಡುವಲ್ಲಿ ಬೆಂಬಲವಾಗಲಿಲ್ಲ. ಅಂದರೆ ಅವನಿಗೆ ದುಡಿಯುವ ಕೌಶಲ್ಯವನ್ನು ದೊರಕಿಸಿಕೊಡುವಲ್ಲಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಮೌಲ್ಯವನ್ನು ಹೊಂದಿಲ್ಲ ಎಂದು ಆ ವಿದ್ಯಾರ್ಥಿಗೆ ತಿಳಿದಿದೆ. ಇನ್ನು ಪಿಎಚ್.ಡಿ ಸಂಶೋಧನೆ ಅವರಿಗೆ ಉದ್ಯೋಗದ ಕೌಶಲ್ಯವನ್ನು ನೀಡುತ್ತದೆ ಎನ್ನುವ ಭರವಸೆ ಅವನಲ್ಲಿ ಕಾಣಿಸುತ್ತಿಲ್ಲ. ಹೀಗೆ ವಿವಿಧ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಬಿ.ಇಡಿ., ಎಂ.ಇಡಿ, ಪದವಿಗಳನ್ನು(ದಿನನಿತ್ಯ ತರಗತಿಗಳ ಮೂಲಕ/ದೂರಶಿಕ್ಷಣದ ಮೂಲಕ/ ಆನ್‌ಲೈನ್ ಮೂಲಕ) ಪಡೆದು, ಶಿಕ್ಷಕ ಹುದ್ದೆಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಹತೆಯನ್ನು ಪಡೆಯದೆ, ಮತ್ತೆ ಎಂ.ಎ. ಪದವಿಗೆ, ಪಿಎಚ್.ಡಿ ಅಧ್ಯಯನಕ್ಕೆ ನೋಂದಾಯಿಸಿಕೊಂಡವರ ಸಂಖ್ಯೆ ಕಡಿಮೆ ಇಲ್ಲ.

ಇತ್ತೀಚಿಗೆ ಹೆಚ್ಚು ಹೆಚ್ಚು ಪದವಿಗಳನ್ನು ಪಡೆಯುವ ಯುವಕರ ಸಂಖ್ಯೆ ಅಸಂಖ್ಯಾತವಾಗಿದೆ. ಈ ರೀತಿ ಯುವ ಜನರಲ್ಲಿ ಪದವಿಗಳನ್ನು ಪಡೆಯುವ ನಿರ್ಧಾರದಲ್ಲಿನ ಬದಲಾವಣೆಗಳು ನನಗೆ, ‘ಡಿಪ್ಲೊಮಾ ಡಿಸೀಸ್’ ಪುಸ್ತಕವನ್ನು ನೆನಪಿಸುತ್ತದೆ. ಈ ಪುಸ್ತಕವನ್ನು ಬ್ರಿಟಿಷ್ ಅರ್ಥಶಾಸ್ತ್ರಜ್ಞ ರೊನಾಲ್ಡ್ ಡೋರ್ ಬರೆದಿದ್ದಾರೆ. ಮೊದಲ ಬಾರಿಗೆ ಈ ಪುಸ್ತಕವನ್ನು 1976ರಲ್ಲಿ ಪ್ರಕಟಿಸಲಾಯಿತು. ಈ ವಿಷಯದಲ್ಲಿ ಹೆಚ್ಚಿನ ಶೋಧಗಳನ್ನು ನಡೆಸಿ ಮತ್ತೆ 2001ರಲ್ಲಿ ವಿಶೇಷ ಸಂಪುಟವನ್ನು ರೊನಾಲ್ಡ್ ಡೋರ್ ಪ್ರಕಟಿಸಿದ್ದಾರೆ. 20 ವರ್ಷಗಳ ನಂತರ ಡೋರ್ ಅವರ ಪುಸ್ತಕದ ಪ್ರಸ್ತುತತೆ, ಇದು ನೀಡುವ ಅಪರೂಪದ ರಚನಾತ್ಮಕ ವಿವರಣೆಗಳು ಪ್ರಚಲಿತ ಸಮಯದಲ್ಲಿ ಹೆಚ್ಚು ಹೆಚ್ಚು ಪದವಿಗಳನ್ನು ಸಂಗ್ರಹಿಸಲು ಪ್ರೇರೇಪಿಸುವ ಶೈಕ್ಷಣಿಕ ವಿದ್ಯಮಾನದ ಪ್ರತಿಬಿಂಬವಾಗಿದೆ.

Advertisements

R 45

ಈ ರೀತಿ ಹೆಚ್ಚು ಹೆಚ್ಚು ಪದವಿಗಳನ್ನು ಪಡೆಯಬೇಕು ಎನ್ನುವ ವಿದ್ಯಾರ್ಥಿಗಳ ವರ್ತನೆಯಲ್ಲಿ ಉಂಟಾಗಿರುವ ಬದಲಾವಣೆಯನ್ನು ‘ಡೋರ್ ಪ್ರಮೇಯ’ ಎಂದು ಕರೆಯಲಾಗುತ್ತದೆ. ಇಲ್ಲಿ ಡೋರ್ ಗಮನಿಸಿರುವುದು ಅರ್ಹತೆಗಳು ಅಥವಾ ಪದವಿಗಳು ಅಪಮೌಲ್ಯೀಕರಣ ಎನ್ನುವ ಅಂಶವನ್ನು ಹೆಚ್ಚು ಹೆಚ್ಚು ಪದವಿಗಳನ್ನು ಸಂಗ್ರಹಿಸಲು ಮತ್ತು ಡಿಪ್ಲೊಮಾಗಳನ್ನು ವೇಗವಾಗಿ ಪಡೆಯುವ ಪ್ರವೃತ್ತಿಯು ಅನೇಕ ದೇಶಗಳಲ್ಲಿ ಜನಪ್ರಿಯವಾಗಿದೆ. ಆದರೂ ಭಾರತವು ಅವರ ಮಾದರಿಯ ಭಾಗವಾಗಿರಲಿಲ್ಲ. ‘ಡೋರ್ ಪ್ರಮೇಯ’ವು ತಿಳಿಸುವ ಒಳನೋಟಗಳು, ಅದರ ಅನ್ವಯಿಕತೆಯು ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶಕ್ಕೂ ಸಂಬಂಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಮಾಣಪತ್ರಗಳು, ಡಿಪ್ಲೊಮಾಗಳು ಮತ್ತು ಪದವಿಗಳಿಗೆ ಹೆಚ್ಚಿನ ಬೇಡಿಕೆಯಿದೆ.

‘ದೇವ್ ಲಾಹಿರಿ’ ಅವರು ತಮ್ಮ ಅನುಭವ ಕಥನವನ್ನು ವಿವರಿಸುವ ಪುಸ್ತಕಕ್ಕೆ ‘ದಿ ಗ್ರೇಟ್ ಇಂಡಿಯನ್ ಸ್ಕೂಲ್ ಬಜಾರ್’ ಎನ್ನುವ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಶೀರ್ಷಿಕೆಯು ಉನ್ನತ ಶಿಕ್ಷಣಕ್ಕೆ ಪ್ರಸ್ತುತವಾಗಿದೆ. ಉನ್ನತ ಶಿಕ್ಷಣದಲ್ಲಿ 1990ರ ದಶಕದ ಮಧ್ಯಭಾಗದಿಂದ ವಿಶಾಲವಾದ ಮತ್ತು ವೈವಿಧ್ಯಮಯವಾದ ಮಾರುಕಟ್ಟೆಯು ಬೆಳೆದಿದೆ. ಅದರ ಬೆಳವಣಿಗೆ ಹೆಚ್ಚಿನ ವೈವಿಧ್ಯತೆಯ ಅರ್ಹತೆಗಳು ಎಂಬ ಅರ್ಥದ ಜಾಹೀರಾತುಗಳು ಮತ್ತು ಕೋರ್ಸ್ ಗಳಿಗೆ ನೀಡುತ್ತಿರುವ ಆಫರ್‌ನಲ್ಲಿ ಅದರ ಬೇಡಿಕೆ ವೇಗವಾಗಿ ಬೆಳೆಯುತ್ತದೆ. ಯುವಕರು ಒಂದು ಕೋರ್ಸ್ ಗೆ ನೋಂದಾಯಿಸಿ, ಮತ್ತೊಂದು ಕೋರ್ಸ್ ಗೆ ದಾಖಲಾಗಲು ಬಯಸುತ್ತಾರೆ. ಇತ್ತೀಚಿಗೆ ಒಂದೇ ಸಮಯದಲ್ಲಿ ಉಭಯ ಪದವಿಗಳನ್ನು ಅಧ್ಯಯನ ಮಾಡಬಹುದು ಎನ್ನುವ ಯುಜಿಸಿಯ ಅಧಿಕೃತ ಅನುಮತಿಯು ಪದವಿ ಪಡೆಯುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪ್ರಚೋದನೆಯ ಪ್ರೇರಕ ಶಕ್ತಿಯು ಶಿಕ್ಷಣ ವ್ಯವಸ್ಥೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಇದೆ. ಆಂತರಿಕವಾಗಿ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ಹೇಗೆಂದರೆ ಕೋರ್ಸ್ ನ ವಿಷಯ ಮತ್ತು ಅದರ ಗುರಿಗಳನ್ನು ವ್ಯಾಖ್ಯಾನಿಸುವ ಮೂಲಕ ಹೆಚ್ಚುವರಿ ಅರ್ಹತೆಗಳನ್ನು ಪಡೆಯಬೇಕು ಎನ್ನುವ ಪ್ರವೃತ್ತಿಗೆ, ವಿಶೇಷ ಪರಿಣಿತಿ ಎಂದು ಕರೆಯಲ್ಪಡುವುದು ಸಮಕಾಲೀನ ವಿದ್ಯಮಾನವಾಗಿದೆ. ಇಂತಹ ಕೋರ್ಸ್ ನ ಜ್ಞಾನದಿಂದ ಭಿನ್ನವಾದ ನಿಗೂಢ ಕೌಶಲ್ಯಗಳು ಲಭಿಸುತ್ತದೆ. ಇಲ್ಲಿ ಕಲಿತರೆ ‘ಉದ್ಯೋಗ ಖಚಿತ/ಪ್ಲೇಸ್‌ಪೆಂಟ್ ಖಚಿತ’ ಎನ್ನುವ ಭರವಸೆ ಹುಟ್ಟಿಸುವ ಜಾಹೀರಾತು ನುಡಿಗಟ್ಟುಗಳು ಕೋರ್ಸ್ ಗಳ ಆಕರ್ಷಣೆಯನ್ನು ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳನ್ನು ಸೆರೆಹಿಡಿಯುತ್ತಿವೆ.

ಈ ಪ್ರವೃತ್ತಿಯನ್ನು ಪ್ರಭಾವಿಸುವ ಚಾಲನಾ ಶಕ್ತಿಯು ಆರ್ಥಿಕತೆಯಲ್ಲಿ ನಿಗೂಢವಾಗಿ ನೆಲೆಗೊಂಡಿದೆ. ಆರ್ಥಿಕ ಬೆಳವಣಿಗೆಯು ಅನೇಕ ದೇಶಗಳಲ್ಲಿ ತೃಪ್ತಿಕರ ಉದ್ಯೋಗ ಅವಕಾಶಗಳ ಸೃಷ್ಟಿಗೆ ಅಥವಾ ವಿಸ್ತರಣೆಗೆ ಕಾರಣವಾಗಿಲ್ಲ. ನಮ್ಮಲ್ಲಿ, ಉತ್ತಮ ಆದಾಯವನ್ನು ನೀಡುವ ಅಥವಾ ಉದ್ಯೋಗಗಳ ಕೊರತೆ ಅನೇಕ ಪ್ರದೇಶಗಳಲ್ಲಿದೆ. ಇದನ್ನು ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಎಂದು ಉಲ್ಲೇಖಿಸಲು ಬರುವುದಿಲ್ಲ. ನಿರುದ್ಯೋಗದ ಭಯ ಮತ್ತು ಮನೋಭಾವನೆಯು ಯುವಕರನ್ನು ಹೊಸ ಅರ್ಹತೆಗಳನ್ನು ಪಡೆದುಕೊಳ್ಳುವಂತೆ ಪ್ರಚೋದಿಸಿ ಉತ್ತೇಜಿಸುತ್ತಿದೆ. ಈ ಪ್ರವೃತ್ತಿಯು ಸಮಕಾಲೀನ ಮಾರುಕಟ್ಟೆಯ ರಾಜಕೀಯವು ಆಗಿದೆ. ಇದು ಜನರು ಉದ್ಯೋಗಗಳಿಗಾಗಿ ತಮಗೆ ಹೆಚ್ಚು ಸಂಬಂಧಿಸಿದ ಕ್ಷೇತ್ರ/ವಲಯ/ಡೊಮೇನ್ ಅನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ತನ್ನನ್ನು ತಾನು ಈ ಕೆಲಸಕ್ಕೆ ಸೂಕ್ತವೆಂದು/ಅರ್ಹ ಎಂದು ಪ್ರತಿನಿಧಿಸುವ ಅಥವಾ ಪ್ರತಿಪಾದಿಸಿಕೊಳ್ಳುವುದಕ್ಕೆ ಬದಲಾಗಿ, ತಾವು ಪಡೆದಿರುವ ಪ್ರಮಾಣಪತ್ರಗಳನ್ನು(certificates) ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಉದ್ಯೋಗ ಮಾರುಕಟ್ಟೆಯಲ್ಲಿನ ಅಸ್ಥಿರತೆಗಳು ಯಾವುದೇ ಉದ್ಯೋಗವು ಕೊನೆಯವರೆಗೆ ಉಳಿಯುವುದಿಲ್ಲ ಎನ್ನುವುದನ್ನು ಇತ್ತೀಚಿನ ಉದ್ಯೋಗ ಮಾರುಕಟ್ಟೆಯ ಪ್ರವೃತ್ತಿಗಳು ಸೂಚಿಸುತ್ತಿವೆ. ಇದು ವಿಭಿನ್ನ ಮತ್ತು ಹಲವು ರೀತಿಯ ಉದ್ಯೋಗಗಳನ್ನು ಮಾಡಲು ಅರ್ಹರಾಗಬೇಕು ಎನ್ನುವ ಆತಂಕದ ಮನೋಭಾವನೆಯನ್ನು ರೂಪಿಸಿ, ಜನರನ್ನು ಕಲಿಕೆಯ ನೆಲೆಯಲ್ಲಿ ಅತಂತ್ರ ಸ್ಥಿತಿಯಲ್ಲಿ ಇಡುತ್ತಿದೆ.

1980ರ ದಶಕದಲ್ಲಿ ನಡೆದ ಶೈಕ್ಷಣಿಕ ಚರ್ಚೆಗಳು ಮತ್ತು ಅಧ್ಯಯನಗಳು ಉದ್ಯೋಗಗಳಿಂದ ಪದವಿಗಳನ್ನು ಬೇರ್ಪಡಿಸಬಹುದು ಎಂದು ನಂಬಲಾಗಿತ್ತು. ಔಪಚಾರಿಕ ವಿದ್ಯಾರ್ಹತೆಯಿಂದ ಉದ್ಯೋಗಗಳನ್ನು ಬೇರ್ಪಡಿಸಿ, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಒಳ್ಳೆಯದು ಎಂಬುದು 1980ರ ದಶಕದ ವಾದವಾಗಿತ್ತು. ಈ ವಾದವು ಪದವಿಗಳು ಮತ್ತು ಪ್ರಮಾಣಪತ್ರಗಳನ್ನು ಸಂಗ್ರಹಿಸುವುದರಿಂದ ಯುವಕರು ನಿರುತ್ಸಾಹಗೊಳ್ಳುತ್ತಾರೆ. ವಿದ್ಯಾವಂತ ಉದ್ಯೋಗಾಕಾಂಕ್ಷಿ ಯುವಕರಲ್ಲಿ ದುಡಿಯುವ ವಿಶ್ವಾಸಾರ್ಹ ಗುಣಲಕ್ಷಣಗಳು ಬರುವಂತೆ ಮಾಡದಿದ್ದರೆ, ಯಾವುದೇ ಸಂದರ್ಭದಲ್ಲಿ ಒಂದಲ್ಲ, ಮತ್ತೊಂದು ಕೋರ್ಸ್ ಗೆ ಸೇರುವ ಒತ್ತಡ ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ದುಡಿಮೆಯ ಕೌಶಲ್ಯ ಬಾರದಿದ್ದಾಗ, ಅವರ ಪೋಷಕರು ಸಹ ಮತ್ತಷ್ಟು ಪದವಿಗಳನ್ನು ಓದಿದರೆ/ಪಡೆದರೆ ತನ್ನ ಮಗಳು/ಮಗನಿಗೆ ಉದ್ಯೋಗ ಸಿಗಬಹುದು ಎಂದು ಭಾವಿಸಿ ಮಕ್ಕಳು ಹೆಚ್ಚಿನ ಪದವಿ ಮತ್ತು ಸರ್ಟಿಪಿಕೇಟ್ ಪಡೆಯಲು ಉತ್ಸುಕರಾಗಿರುತ್ತಾರೆ. ಅವರ ಮಕ್ಕಳು ಸಮಯವನ್ನು ವ್ಯರ್ಥ ಮಾಡುವ ಬದಲು ದೂರಶಿಕ್ಷಣ/ಕರೆಸ್ಪಾಂಡೆನ್ಸ್ ಕೋರ್ಸ್ ಗಳಿಗೆ ದಾಖಲಾಗಲು ಬೆಂಬಲಿಸುತ್ತಾರೆ.

ciel blog invest on training and education

ಈಗ ದೂರಶಿಕ್ಷಣ/ಕರೆಸ್ಪಾಂಡೆನ್ಸ್ ‘ಮುಕ್ತ ಕಲಿಕೆ’ ಎಂದು ಕರೆಯಲ್ಪಟ್ಟು ಹೆಚ್ಚು ಪ್ರಚಾರಗೊಂಡಿದೆ. ಇದನ್ನು ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ ಗಳು (ಎಂಒಒಸಿ) ಅಥವಾ Massive Open Online Courses (MOOC)ಗಳು ಎಂದು ಕರೆಯಲಾಗುತ್ತಿದೆ. ಇಲ್ಲಿ ಯಾರಾದರೂ ಉಚಿತ ಆನ್‌ಲೈನ್ ಕೋರ್ಸ್ ಗಳಿಗೆ ದಾಖಲಾಗಬಹುದು. ಈ ಪ್ರಕ್ರಿಯೆಗಳನ್ನು ಇಂಟರ್ನೆಟ್ ಮತ್ತು ಡಿಜಿಟಲ್ ವ್ಯವಸ್ಥೆಯು ‘ಸ್ವಯಂ ಕಲಿಕೆಯ ಮಾರುಕಟ್ಟೆ’ಯನ್ನು ಹೆಚ್ಚು ಸಕ್ರಿಯಗೊಳಿಸಿತು. ಇದು ಕೆಲವರ ಮಟ್ಟಿಗೆ, ಸ್ವಯಂ ಉದ್ಯೋಗವನ್ನು ಹೆಚ್ಚಿಸಿದೆ. ಆದರೆ ಔಪಚಾರಿಕ ಉದ್ಯೋಗಗಳನ್ನು ಹೊಂದುವ ಆಸೆಯನ್ನು ಕಡಿಮೆ ಮಾಡಿದೆ. ಇದು ಗಮನಾರ್ಹವಾದ ಸ್ಥಿತ್ಯಂತರವನ್ನು ಕಂಡಿದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುತ್ತಿರುವ ತರಬೇತಿ ಮಾರುಕಟ್ಟೆಯು ಅಸಂಖ್ಯಾತ ಯುವಕರನ್ನು ಆಕರ್ಷಿಸುತ್ತಿದೆ. ಕ್ರೇಗ್ ಜೆಫ್ರಿ ಅವರು ಭಾರತದಲ್ಲಿ ನಡೆಸಿದ ಅಧ್ಯಯನದ ಆಧಾರದ ಮೇಲೆ ಈ ಪ್ರವೃತ್ತಿಯನ್ನು ‘ಕಾಯಿಸುವ ರಾಜಕೀಯ’ (politics of waiting) ಎಂದು ಕರೆದಿದ್ದಾರೆ.

ಇದನ್ನು ಓದಿದ್ದೀರಾ?: ಈ ಶತಮಾನದ ಸಾಕ್ಷಿಯಾಗಿ ಬದುಕಿದ ಶಿವರಾಮ ಕಾರಂತ : ಒಂದು ಸಂದರ್ಶನ

ಡೋರ್ ಪ್ರಮೇಯವು ಪದವಿಗಳ ಅಪಮೌಲ್ಯೀಕರಣದ ಗುಣಮಟ್ಟವನ್ನು ಮಾಪನ ಮಾಡುವ ಮಾನದಂಡಗಳನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಬಲವಾದ ಸಂಬಂಧವನ್ನು ಹೊಂದಿದೆ ಎಂದು ಸಾಬೀತು ಮಾಡಿದೆ. ನೀವು ಒಂದು ಕೋರ್ಸ್ ನಿಂದ ಏನನ್ನು ಕಲಿಯಬೇಕೆಂದು ನಿರೀಕ್ಷಿಸುತ್ತೀರೋ ಅದನ್ನು ಆ ಕೋರ್ಸ್ ನೀಡದಿದ್ದಾಗ, ನೀವು ಉನ್ನತ ಮಟ್ಟಕ್ಕೆ ಮತ್ತೊಂದು ಕೋರ್ಸ್ ಗೆ ಹೋಗುತ್ತೀರಿ. ಅದೇ ಕೋರ್ಸ್ ಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ(ನಿರ್ದಿಷ್ಟವಾಗಿ ಸಾರ್ವಜನಿಕ ಉತ್ನತ ಶಿಕ್ಷಣ ಸಂಸ್ಥೆಗಳಲ್ಲಿ) ದೀರ್ಘಕಾಲದ ಹಣಕಾಸಿನ ಮುಗ್ಗಟ್ಟು ಹಾಗೂ ಖಾಲಿ ಹುದ್ದೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲಗಳು ಕ್ಷೀಣಿಸಿ ಅಲ್ಲಿನ ಕಲಿಕಾ ಪರಿಸರವು ಕಳಪೆಯಾಗಲು ಕಾರಣವಾಗಿದೆ. ಇದರ ಪರಿಣಾಮವಾಗಿ ಇರುವುದರಲ್ಲಿಯೇ ಕಲಿಕೆಯನ್ನು ಸುರುಳಿ ವಿಧಾನದಲ್ಲಿ(Spiral method) ವ್ಯವಸ್ಥಿತವಾಗಿ ವಿಸ್ತರಿಸಿರುವ ಪ್ರಕ್ರಿಯೆಗೆ ಮಹತ್ವ ನೀಡಲಾಗುತ್ತಿದೆ. ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳು ಕಳೆದ ಮೂರು ದಶಕದಲ್ಲಿ (ಅನುದಾನ ಕೊರತೆಯ ಬಿಕ್ಕಟ್ಟು ಸೇರಿದಂತೆ) ನಿರಂತರವಾಗಿ ಟೊಳ್ಳು ಹಾದಿಯನ್ನು ಅನುಭವಿಸುತ್ತಿವೆ. ಗುಣಮಟ್ಟವನ್ನು ಕಾಪಾಡಿಕೊಳ್ಳದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಒತ್ತಡಗಳು, ವಿದೇಶಿ ವ್ಯವಸ್ಥೆಗಳು ಮತ್ತು ದುಬಾರಿ ಖಾಸಗಿ ಸಂಸ್ಥೆಗಳ ವಿಸ್ತರಣೆಯು ಹೆಚ್ಚಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಆಯ್ಕೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈಗ ಅವಕಾಶ ವಂಚಿತ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಬಾಗಿಲುಗಳನ್ನು ಬಡಿಯಲು ಪ್ರಾರಂಭಿಸುತ್ತಿರುವಾಗಲೇ, ಉನ್ನತ ಶಿಕ್ಷಣ ಸಂಸ್ಥೆಗಳು ಅವರೋಹಣ ಚಲನೆಗೆ ದಿಕ್ಕು ಮಾಡಿರುವುದು ನಮ್ಮ ದುರಂತ. ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಗುರಿ ಸಾಧನೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಾರ್ಯತತ್ಪರತೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಹಾಗೂ ಕುಟುಂಬಗಳಿಂದ ಬಂದ ಮಕ್ಕಳು ಉನ್ನತ ಶಿಕ್ಷಣವನ್ನು ಪ್ರವೇಶಿಸದಂತೆ ಮಾಡಲಾಗುತ್ತಿದೆ.

ಉನ್ನತ ಶಿಕ್ಷಣದ ಗುಣಮಟ್ಟದ ಮಾನದಂಡಗಳ ಕುಸಿತವನ್ನು ವಿವರಿಸಲು ಇನ್ನೂ ಹಲವು ಮಾರ್ಗಗಳಿವೆ.  ಡಿಜಿಟಲ್ ತಂತ್ರಜ್ಞಾನವು ವಿದ್ಯಾರ್ಥಿ ವರ್ತನೆಯಲ್ಲಿ ಗಮನಾರ್ಹವಾದ ಬದಲಾವಣೆ ಉಂಟಾಗಲು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು ವಾರದ ಸಮಾಲೋಚನೆಯ ಪ್ರಸಾರದಲ್ಲಿ ಕಲಿಕೆಗೆ ಸಂಬಂಧಿಸಿದಂತೆ, ನಾನು ಒಂದು ದಿನ ಹೇಳಿಕೆಯನ್ನು ಕೇಳಿದೆ. ಅದು ಏನು ಎಂದರೆ, ‘ದಯವಿಟ್ಟು ಪ್ರೋಗ್ರಾಂ ಮಾರ್ಗಸೂಚಿಯನ್ನು ಎಚ್ಚರಿಕೆಯಿಂದ ಓದಿ, ಓದುವುದು ನಿಮಗೆ ಉತ್ತಮ ಚಟುವಟಿಕೆಯಾಗಿದೆ’ ಎನ್ನುವ ಪ್ರಚಾರಕ್ಕೆ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾನಿಲಯವು ಒತ್ತು ನೀಡುತ್ತಿದೆ. ಇತ್ತೀಚೆಗೆ ‘ಗಟ್ಟಿ ಓದು’ ಶಿಕ್ಷಕರ ತರಬೇತಿಗಳಲ್ಲಿ ಹೆಚ್ಚು ಆದ್ಯತೆ ಪಡೆಯುತ್ತಿರುವುದನ್ನು ನಾವು ಕಾಣಬಹುದು. ಇದು ಓದುವ ಮೌಲ್ಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆವರಿಸಿರುವ ಬಿಕ್ಕಟ್ಟನ್ನು ಅತ್ಯಂತ ಸೂಕ್ಷ್ಮವಾಗಿ ಸೂಚಿಸುತ್ತದೆ. ಅನೇಕ ಹೊಸ ಹೊಸ ಸುಧಾರಣೆಗಳನ್ನು ಪರಿಚಯಿಸಿದ್ದಾಗಿಯೂ ಸಾಂಕ್ರಾಮಿಕ ರೋಗದಿಂದಾಗಿ ದಿನಚರಿಗಳು ದುರ್ಬಲಗೊಂಡು ಯಶಸ್ವಿಯಾಗಲಿಲ್ಲ. ಡೋರ್ ಪ್ರಮೇಯವು ಐವತ್ತು ವರ್ಷಗಳ ಹಿಂದೆ ಒತ್ತು ನೀಡಿದ/ಅಂಡರ್ಲೈನ್ ಮಾಡಿದ ಹೇಳಿರುವ ಮೂಲಭೂತ ಸಮಸ್ಯೆಗಳು ಮತ್ತು ಪ್ರವೃತ್ತಿಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ.

ನಮ್ಮ ಶಿಕ್ಷಣ ಸುಧಾರಣೆ ಕುರಿತ ಚರ್ಚೆಗಳು, ಸುಧಾರಣಾ ಕ್ರಮಗಳು ಮತ್ತು ವ್ಯವಸ್ಥೆಯಲ್ಲಿ ಇರುವ ವಾಸ್ತವಗಳ ನಡುವೆ ಸಾಕಷ್ಟು ಅಂತರವಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಹಳೆಯ ಸಮಸ್ಯೆಗಳ ನಿರಂತರತೆಯನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದಿರುವುದು ಸಮಸ್ಯೆಗಳ ಮೂಲಗಳು ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. ನಾವು ಹಿಂದಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಶಿಕ್ಷಣದ ಖಾಸಗೀಕರಣವು ಉಂಟುಮಾಡಿರುವ ಬಿಕ್ಕಟ್ಟುಗಳನ್ನು ಮತ್ತು ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಸುಧಾರಣೆಗಳ ಸ್ವರೂಪ ಮತ್ತು ಅನುಷ್ಠಾನದ ಆಯ್ಕೆಗಳನ್ನು ಖಂಡಿತವಾಗಿ ಸುಧಾರಿಸಬೇಕಾಗಿದೆ.

WhatsApp Image 2023 09 09 at 9.26.40 PM

ಈ ದಿಕ್ಕಿನಲ್ಲಿ ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ‘ರಾಜ್ಯ ಶಿಕ್ಷಣ ಸಮಿತಿ’ಯು ರಾಜ್ಯದ ಶೈಕ್ಷಣಿಕ ಜಗತ್ತಿನ ರಚನಾತ್ಮಕ ಬದಲಾವಣೆಗೆ ಪ್ರಯತ್ನಿಸಬೇಕಾಗಿದೆ. ಅದರಲ್ಲಿಯೂ ಸಾರ್ವಜನಿಕ, ಶೈಕ್ಷಣಿಕ ವ್ಯವಸ್ಥೆಯ ಕರಗುವಿಕೆಯನ್ನು ತಡೆಯುವ ಮತ್ತು ಸಮಸಮಾಜವನ್ನು ರೂಪಿಸುವ ದೃಷ್ಟಿಕೋನದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ದಿಕ್ಕಿನಲ್ಲಿ ಗಂಭೀರವಾಗಿ ಚರ್ಚೆ ಮಾಡಬೇಕಾಗಿದೆ. ಶಿಕ್ಷಣದ ಖಾಸಗೀಕರಣದ ಭರಾಟೆ, ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಪ್ರಾದೇಶಿಕ ಅಸಮಾನತೆ, ಲಿಂಗ ಅಸಮಾನತೆ, ಹಸಿವು ಇವುಗಳು ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌಜನ್ಯ, ಪರಿಸರಾತ್ಮಕ ಬಿಕಟ್ಟುಗಳು, ಜಾಗತಿಕ ತಾಪಮಾನದಿಂದ ಉಂಟಾಗುತ್ತಿರುವ ಸಾಮಾಜಿಕ ಬಿಕ್ಕಟ್ಟುಗಳು ತಡೆಯುವ ದಿಕ್ಕಿನಲ್ಲಿ ರಾಜ್ಯ ಶಿಕ್ಷಣ ನೀತಿಯು ಗಂಭೀರವಾಗಿ ಯೋಚಿಸಬೇಕಾಗಿದೆ.

ಇದನ್ನು ಓದಿದ್ದೀರಾ?: ಕೆ ಸಿ ರಘು: ಮಾಸದ ನಗು, ಜ್ಞಾನದ ಬೆರಗು

ಹಾಗೆಯೇ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ಜೊತೆ ಜೊತೆಗೆ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಕೋರ್ಸ್ ಗಳು ಹೆಚ್ಚು ಗುಣಮಟ್ಟವನ್ನು ಹೊಂದುವಂತೆ ಮಾಡಬೇಕಾಗಿದೆ. ಏಕೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕುಗ್ಗುವಿಕೆಯು ಬಹುತ್ವದ ಭಾರತವನ್ನು ಇಲ್ಲವಾಗಿಸುವ ಸಾಧ್ಯತೆಯಿದೆ. ಅದರಲ್ಲಿಯೂ ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಹೋದರತೆ, ಸಮಾನ ಅವಕಾಶ, ಜಾತ್ಯತೀತ ನೆಲೆಗಳನ್ನು ಇಲ್ಲವಾಗಿಸುವ ಪ್ರಯತ್ನದಂತೆ ಖಾಸಗಿ ಶಿಕ್ಷಣದ ಪಠ್ಯಗಳು ಹಾಗೂ ವಿಶ್ವವಿದ್ಯಾಲಯಗಳ ಚರ್ಚೆಗಳು ನಡೆಯುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇತ್ತೀಚೆಗೆ ಜಾತಿಗೊಂದು, ಮಠಕ್ಕೊಂದು ಡಿಮ್ಡ್ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವುದು ಒಂದುಕಡೆಯಾದರೆ, ಕಾರ್ಪೊರೇಟ್ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅಪಹಾಸ್ಯ ಮಾಡಿದಂತಾಗಿದೆ. ಅಂದರೆ ಸಮಕಾಲೀನ ಸಂದರ್ಭದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯಗಳ ನಡುವಿನ ಸಂಬಂಧಗಳನ್ನು ಬಹಳ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಪರಿಶೀಲಿಸಿ ಶೈಕ್ಷಣಿಕ ವ್ಯವಸ್ಥೆಯು ಉತ್ಪಾದಿಸುತ್ತಿರುವ ಅಸಮಾನತೆಯನ್ನು ನಿಯಂತ್ರಿಸುವ ಕ್ರಮಗಳನ್ನು ರಾಜ್ಯ ಶಿಕ್ಷಣ ಸಮಿತಿಯು ಮಾಡಬೇಕಾಗಿದೆ. ಆಗಷ್ಟೇ ಶೈಕ್ಷಣಿಕ ವ್ಯವಸ್ಥೆಯು ಸುಧಾರಿಸಲು ಸಾಧ್ಯ. ಈ ದಿಕ್ಕಿನಲ್ಲಿ ರಾಜ್ಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ರಾಚನಿಕವಾಗಿ ಬದಲಾವಣೆ ತರುವ ಜವಾಬ್ದಾರಿಯು ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಜ್ಯ ಶಿಕ್ಷಣ ಸಮಿತಿಯ ಮುಂದಿದೆ. ಈ ಕುರಿತು ಇನ್ನಷ್ಟು ಚರ್ಚೆ, ಸಂವಾದಗಳು ನಡೆಯುವ ಅಗತ್ಯವಿದೆ.

WhatsApp Image 2023 10 19 at 12.23.02
ಡಾ. ಎಚ್. ಡಿ. ಪ್ರಶಾಂತ್
+ posts

ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಎಚ್. ಡಿ. ಪ್ರಶಾಂತ್
ಡಾ. ಎಚ್. ಡಿ. ಪ್ರಶಾಂತ್
ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

3 COMMENTS

  1. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗಬೇಕಿದೆ. ಆ ಹಿನ್ನೆಲೆಯಲ್ಲಿ ಅರ್ಥಪೂರ್ಣವಾದ ಪ್ರಶ್ನೆಗಳನ್ನು ಎತ್ತಿರುವಿರಿ. ಸಕಾಲಿಕವಾದ ಲೇಖನವಿದು. ಅಭಿನಂದನೆಗಳು ಸರ್ ನಿಮಗೆ.

  2. ನಿಜ… ಇಂದಿನ ಶಿಕ್ಷಣವು ಓದಿದವನಿಗೆ ಉದ್ಯೋಗ ಎಂಬ ಭರವಸೆಯನ್ನ ನೀಡಲು ಆಗುತ್ತಿಲ್ಲ ಅಷ್ಟಕ್ಕೂ ಅಲ್ಲಿ ಅವನಿಗೆ ಬದುಕುವ ಮೌಲ್ಯವನ್ನು ಕೂಡ ಕಲಿಸಲಾಗಿಲ್ಲ. ಶೈಕ್ಷಣಿಕವಾದ ಆಲೋಚನೆಗಳು ಹೊಸತಾಗಬೇಕು ಮುರಿದು ಕಟ್ಟಬೇಕು ಅಂದಾಗ ಮಾತ್ರ ಸ್ವಾವಲಂಬಿ ಬದುಕನ್ನು ನೀಡಲು ಸಾಧ್ಯ ಈ ನಿಟ್ಟಿನಲ್ಲಿ ಈ ಲೇಖನ ಬಹಳ ಅರ್ಥಪೂರ್ಣ

  3. ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಆಗುಹೋಗುಗಳನ್ನು ಅನಾವರಣ ಗೊಳಿಸಿದ ಲೇಖನ ಸಮಯೋಚಿತವಾಗಿದೆ. ಶಿಕ್ಷಣ ವ್ಯವಸ್ಥೆಯ ಹಾದಿಯಲ್ಲಿ ತಲುಪಬೇಕಾದ ಗುರಿಗಳ ಬಗ್ಗೆ ಇರುವ ಆತಂಕಗಳನ್ನು ಉಲ್ಲೇಖಿಸಿರುವುದು ಸಮಂಜಸವಾಗಿದೆ. ಪ್ರೊಫೆಸರ್ ಸುಖದೇವ್ ರ ನೇತೃತ್ವದಲ್ಲಿ ನಡೆಯುವ ರಾಜ್ಯ ಶಿಕ್ಷಣ ಸಮಿತಿಯು ಪ್ರೊಫೆಸರ್ ಪ್ರಶಾಂತ್ ಸರ್ ಅವರ ಲೇಖನದ ಆಶಯಗಳನ್ನು ಅಗತ್ಯವಾಗಿ ಅವಲೋಕಿಸಬೇಕಾಗಿದೆ.
    ಸರಿಯಾದ ಸಮಯದಲ್ಲಿ ಸ್ಪಷ್ಟವಾದ ಶಿಕ್ಷಣ ನೀತಿಯ ಬಗ್ಗೆ
    ಸಮಂಜಸವಾದ ಲೇಖನ. ಅಭಿನಂದನೆಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

ಚಿತ್ರದುರ್ಗ | ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಸಬಲೀಕರಣ; ಸಚಿವ ಡಿ.ಸುಧಾಕರ್ ಅಭಿಮತ

"ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ...

Download Eedina App Android / iOS

X