ಬೆಂಗಳೂರಿನಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇರುವ ಹಿನ್ನೆಲೆ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪಂದ್ಯಗಳು ನಡೆಯುವ ದಿನ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ ಕಲ್ಪಿಸಿದೆ. ಜತೆಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್), “ಬೆಂಗಳೂರಿನಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಅಕ್ಟೋಬರ್ 20, 26, ನವೆಂಬರ್ 4, 9, 12ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ಹಿನ್ನೆಲೆ, ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಿಶ್ವಕಪ್ ಪಂದ್ಯಾವಳಿಗಳಿಗೆ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದೆ.
“ಪಂದ್ಯಾವಳಿ ನಡೆಯುವ ಎಲ್ಲ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಬರುವ ಮತ್ತು ಹೋಗುವ ಪ್ರಯಾಣಕ್ಕೆ ₹50 ಟಿಕೆಟ್ ದರ ನಿಗದಿಪಡಿಸಲಾಗಿದೆ. ಕ್ರಿಕೆಟ್ ಪಂದ್ಯದ ದಿನದಂದು ಬೆಳಗ್ಗೆ 7 ಗಂಟೆಗೆ ಪೇಪರ್ ಟಿಕೆಟ್ ಲಭ್ಯವಿರಲಿದೆ” ಎಂದು ತಿಳಿಸಿದೆ.
“ಈ ಕಾಗದದ ಟಿಕೆಟ್‌ಗಳು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆಯ ನಂತರ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿದೆ. ಕಾಗದದ ಟಿಕೆಟ್ ಬೆಲೆ ₹50 ಇದೆ. ಸಾಮಾನ್ಯ ದರದ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗಿದೆ. ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಖರೀದಿಸಿದರೆ ಪಂದ್ಯಗಳು ನಡೆಯುವ ದಿನದಂದು ಪ್ರಯಾಣಿಸಬಹುದು. ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ವಾಟ್ಸ್ ಆಪ್ ಅಥವಾ ನಮ್ಮ ಮೆಟ್ರೋ ಆಪ್ ಇಲ್ಲವೇ ಪೆಟಿಎಂ ಮೂಲಕ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗುವ ಮೊದಲು ಮುಂಗಡವಾಗಿ ಖರೀದಿಸಿದರೆ ಯಾವುದೇ ಅಡಚಣೆ ಇಲ್ಲದೆ ಹಿಂದಿರುಗುವ ಪುಯಾಣಕ್ಕೆ ಬಳಸಬಹುದು” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಮಯ ಪರಿಪಾಲನೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಪ್ರಥಮ
“ಎಂದಿನಂತೆ ಸ್ಮಾರ್ಟ್ ಕಾರ್ಡ್ ಮತ್ತು ಎನ್.ಸಿ.ಎಂ.ಸಿ. ಕಾರ್ಡ್‌ಗಳನ್ನು ಉಪಯೋಗಿಸಬಹುದು. ಪ್ರಯಾಣಿಕರು ಈ ಅವಕಾಶವನ್ನು ಉಪಯೋಗಿಸಿಕೂಂಡರೆ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ಟಿಕೆಟ್ ಕೌಂಟರ್‌ಗಳಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ” ಎಂದಿದೆ.