ಹಿರಿಯ ಸಾಹಿತಿ, ಚಿಂತಕ ದಿ. ಗಿರೀಶ್ ಕಾರ್ನಾಡ್ ರಚಿಸಿದ್ದ ‘ತುಘಲಕ್’ ನಾಟಕವು ತನ್ನ 100ನೇ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ‘ಸಮುದಾಯ ಬೆಂಗಳೂರು’ ರಂಗ ತಂಡವು ‘ಕಾರ್ನಾಡ್ ನೆನಪು – ತುಘಲಕ್ 100ರ ಸಂಭ್ರಮ’ ಹೆಸರಿನಲ್ಲಿ ಎರಡು ದಿನಗಳ ರಂಗೋತ್ಸವನ್ನು ಆಯೋಜಿಸಿದೆ.
ರಂಗೋತ್ಸವವು ಅಕ್ಟೋಬರ್ 28 ಮತ್ತು 29ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಎರಡನೇ ದಿನ (ಅ.29) ‘ತುಘಲಕ್’ ನಾಟಕದ 100ನೇ ಪ್ರದರ್ಶನ ನಡೆಯಲಿದೆ ಎಂದು ತಂಡ ತಿಳಿಸಿದೆ.
ತಂಡವು ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 28ರಂದು ತಂಡವು ಸಿದ್ದಪಡಿಸಿರುವ ಸ್ಮರಣಾ ಸಂಚಿಕೆಯನ್ನು ಹಿರಿಯ ಚಿಂತಕಿ ಡಾ. ವಿಜಯ, ರಂಗ ನಿರ್ದೇಶಕ ಸಿ ಬಸವಲಿಂಗಯ್ಯ, ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಹಾಗೂ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಬಿಡುಗಡೆ ಮಾಡಲಿದ್ದಾರೆ ಎಂದು ಸಮುದಾಯ ತಂಡ ತಿಳಿಸಿದೆ.
ಕಾರ್ನಾಡರ ಕುರಿತು ಹಿರಿಯ ಚಿಂತಕ ವಿ.ಎಸ್ ಶ್ರೀಧರ್, ರಂಗಕರ್ಮಿ ಕೆ.ಎಂ ಚೈತನ್ಯ, ಸಮುದಾಯ ಕರ್ನಾಟಕದ ಕೆ.ಎಸ್ ವಿಮಲಾ ಹಾಗೂ ಹಿರಿಯ ನಾಟಕಕಾರ ಡಾ. ಎಚ್.ಎಸ್ ಶಿವಪ್ರಕಾಶ್ ನೆನಪಿಸಿಕೊಳ್ಳಲಿದ್ದಾರೆ ಎಂದು ತಂಡ ಹೇಳಿದೆ.
ಅಲ್ಲದೆ, ಕಾರ್ನಾಡರ ಕುರಿತು ಕೆ.ಎಂ ಚೈತನ್ಯ ಅವರು ನಿರ್ದೇಶಿಸಿರುವ ಸಾಕ್ಷ್ಯಾ ಚಿತ್ರ ಪ್ರದರ್ಶನವೂ ನಡೆಯಲಿದೆ. ಬಳಿಕ, ಕಾರ್ನಾಡ್ ರಚಿಸಿರುವ ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ ಇರಲಿದೆ ಎಂದು ತಂಡ ತಿಳಿಸಿದೆ.
ಎರಡನೇ ದಿನ (ಅ.29), ಕರ್ನಾಡರ ಕೃತಿಗಳಲ್ಲಿನ ಒಳನೋಟಗಳ ಕುರಿತು ರಂಗ ತಜ್ಞ ನಟರಾಜ್ ಹೊನ್ನವಳ್ಳಿ, ಡಾ. ಎಚ್.ಎಲ್ ಪುಷ್ಟ, ಕೆ.ವೈ ನಾರಾಯಣಸ್ವಾಮಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಕೆ ಮರುಳಸಿದ್ದಪ್ಪ ಮಾತನಾಡಲಿದ್ದಾರೆ. ರಂಗ ತಜ್ಞ ಡಾ. ಶ್ರೀಪಾದ್ ಭಟ್, ಸಿ.ಕೆ ಗುಂಡಣ್ಣ ಹಗೂ ಕೀರ್ತಿ ತೊಂಡಗೆರೆ ಅವರು ‘ರಂಗ ಚಿಂತನ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಅಂದು ರಾತ್ರಿ 7:30ಕ್ಕೆ ‘ತುಘಲಕ್’ ನಾಟಕ ಪ್ರದರ್ಶನ ಇರಲಿದೆ. ನಾಟಕ ನೋಡಲು ಪ್ರವೇಶಕ್ಕೆ ಟಿಕೆಟ್ ದರ 100 ರೂ. ಇರಲಿದೆ ಎಂದು ತಂಡವು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 95919 67557 ಸಂಖ್ಯೆಗೆ ಕರೆ ಮಾಡಬಹುದು ಎಂದು ತಂಡವು ತಿಳಿಸಿದೆ.