ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ರಂದು ಕರಾಳ ದಿನಾಚರಣೆಗೆ ಅನುಮತಿ ಕೇಳಿ ಬೆಳಗಾವಿ ಜಿಲ್ಲಾಡಳಿತಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅರ್ಜಿ ಸಲ್ಲಸಿದೆ.
ಬೆಳಗಾವಿ ಗಡಿ ಭಾಗವನ್ನು ಮಹಾರಾಷ್ಟ್ರದೊಂದಿಗೆ ಸೇರಿಸಬೇಕು ಹೇಳುತ್ತಲೇ ಇರುವ ಎಂಇಎಸ್, ಬೆಳಗಾವಿಯಲ್ಲಿ ನ.1ರಂದು ಕರಾಳ ದಿನ ಆಚರಿಸಲು ಮುಂದಾಗಿದೆ. ಭಾಷಾವಾರು ಆಧಾರದ ಮೇಲೆ ನಡೆದ ರಾಜ್ಯಗಳ ಮರುವಿಂಗಡಣೆ ಮಾಡಿ, ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನ ಮಾಡಬೇಕೆಂದು ಅದು ಒತ್ತಾಯಿಸುತ್ತಿದೆ.
ಇತ್ತೀಚೆಗೆ ನಡೆದ ರಾಜ್ಯೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ‘ಕಳೆದ ವರ್ಷದಂತೆ ಈ ವರ್ಷವೂ ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದರು.
ಇದೀಗ, ಎಂಇಎಸ್ ಮುಖಂಡರು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ರಾಮಪ್ಪ ಅವರನ್ನು ಭೇಟಿ ಮಾಡಿ ಕರಾಳ ದಿನಾಚರಣೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಕಳೆದ ವಾರ, ಎಂಇಎಸ್ ಮುಖಂಡರು ಮುಂಬೈನಲ್ಲಿ ಮಹಾರಾಷ್ಟ್ರದ ವಿವಿಧ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು, ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ್ದಾರೆ.