ಗಂಡನನ್ನು ಕೊಲೆ ಮಾಡಿ, ಹೊಂಡದಲ್ಲಿ ಹಾಕಿ ಬಳಿಕ ಪೊಲೀಸರಿಗೆ ಗಂಡ ಕಾಣುತ್ತಿಲ್ಲವೆಂದು ದೂರು ನೀಡಿದ್ದ ಮೃತನ ಎರಡನೇ ಪತ್ನಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಶಕೀಲ್ ಅಕ್ತಾರ್ ಕೊಲೆಯಾದ ವ್ಯಕ್ತಿ. ಈತ ಮೂಲತಃ ಬಿಹಾರದವರು. ಮೃತನ ಎರಡನೇ ಪತ್ನಿ ನಜೀರ್ ಖಾತುನ್ ಮತ್ತು ನಾದಿನಿ ಕಾಶ್ಮೀರಿ ಬಂಧಿತರು.
ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಶಕೀಲ್ ಅಕ್ಟೋಬರ್ 9ರಂದು ಮನೆಯ ಮಂಚದ ಮೇಲೆ ಮಲಗಿದ್ದರು. ಈ ವೇಳೆ, ಆತನ ಎದೆಯ ಮೇಲೆ ಎರಡನೇ ಪತ್ನಿ ನಜೀರ್ ಖಾತುನ್ ಕುಳಿತು, ಕತ್ತು ಹಿಸುಕಿದ್ದಾಳೆ. ಈ ವೇಳೆ, ಆತನ ಕೈ ಮತ್ತು ಕಾಲುಗಳನ್ನು ನಾದಿನಿ ಕಾಶ್ಮೀರಿ ಬಿಗಿಯಾಗಿ ಹಿಡಿದಿದ್ದಾಳೆ.
ಪ್ರಾಣ ಉಳಿಸಿಕ್ಕೊಳ್ಳಲು ಶಕೀಲ್ ಎಷ್ಟೇ ಪ್ರಯತ್ನಪಟ್ಟರು, ಬಿಡದ ಇಬ್ಬರು ಆರೋಪಿಗಳೂ ಆತ ಕೆಳಗೆ ಬಿದ್ದರೂ ಬಿಡದೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ನಂಬರ್ ಪ್ಲೇಟ್’ ಮರೆಮಾಚಿದ್ದ ಸವಾರನ ವಿರುದ್ಧ ಎಫ್‌ಐಆರ್ ದಾಖಲು
ಶಕೀಲ್ ಅವರನ್ನು ಹತ್ಯೆ ಮಾಡಿದ ಬಳಿಕ ಇಬ್ಬರೂ ಆರೋಪಿಗಳು ಭಾರೀ ಮಳೆ ಬಂದ ಸಮಯದಲ್ಲಿ ಬೆಡ್ ಶೀಟ್ನಲ್ಲೇ ಶವವನ್ನು ಸುತ್ತಿ ಯಾರಿಗೂ ಗೊತ್ತಾಗದ ಹಾಗೇ ಉಪಾಯ ಮಾಡಿ ಮಧ್ಯರಾತ್ರಿಯಲ್ಲಿ ಹೆಣವನ್ನು ಸಾಗಿಸಿದ್ದಾರೆ. ಕೊಲೆಯಾದ ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಹೊಂಡಕ್ಕೆ ಮೃತದೇಹವನ್ನು ಎಸೆದಿದ್ದಾರೆ.
ಈ ಕೃತ್ಯ ಮಾಡಿದ ಎರಡು ದಿನದ ಬಳಿಕ ಆತನ ಎರಡನೇ ಪತ್ನಿ ಆರೋಪಿ ನಜೀರ್ ಖಾತುನ್ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ವೇಳೆ, ಗಂಡನನ್ನು ಹುಡುಕಿ ಕೊಡುವಂತೆ ಪೊಲೀಸರ ಮುಂದೆ ಗೋಳಾಡಿದ್ದಾಳೆ.
ದೂರು ಬಂದ ಮೇರೆಗೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅ.15 ರಂದು ಹೊಂಡದಲ್ಲಿ ಕೆಟ್ಟ ವಾಸನೆ ಬರುತ್ತಿದ್ದೆ ಎಂದು ಮಾಹಿತಿ ಬಂದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಮೃತದೇಹ ಪತ್ತೆಯಾಗಿದೆ.
ಹೊಂಡದಿಂದ ಶವ ಹೊರತೆಗೆದು ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಆರೋಪಿಗಳಾದ ನಜೀರ್ ಖಾತುನ್ ಮತ್ತು ಕಾಶ್ಮೀರಿಯನ್ನು ಬಂಧಿಸಿದ್ದಾರೆ.