ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಹಾಜರಾಗಿಲ್ಲವೆಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ಗುರುವಾರ ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಗೆ ಕೆಎಸ್‌ಆರ್‌ಟಿಸಿ, ಅರಣ್ಯ ಇಲಾಖೆ, ಪಂಚಾಯತಿ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿರಲಿಲ್ಲ. ಅವರ ಬದಲಿಗೆ ದ್ವಿತೀಯ ದರ್ಜೆಯ ಅಧಿಕಾರಿಗಳು ಬಂದಿದ್ದರು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೇವಲ ನೇಮಕಾವಸ್ಥೆಗೆ ಸಭೆ ಮಾಡುತ್ತೀರಾ? ಪರಿಶಿಷ್ಟರು ಅಂದರೆ ಅಧಿಕಾರಿಗಳಿಗೆ ಏಕೆ ಅಸಡ್ಡೆ” ಎಂದು ಕಿಡಿಕಾರಿದ್ದಾರೆ.
ಪುರಸಭೆ ಸದಸ್ಯ ರಾಜಗೋಪಾಲ್ ಮಾತನಾಡಿ, “ತಾಲೂಕು ಆಡಳಿತ ಪರಿಶಿಷ್ಟ ಜಾತಿ ಮತ್ತು ವಿಶಿಷ್ಟ ವರ್ಗದ ಕುಂದುಕೊರತೆ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ನೇತೃತ್ವದಲ್ಲಿ ಸಭೆ ನಡೆಸುವಂತೆ ದಲಿತ ಮುಖಂಡರು ಒತ್ತಾಯಿಸಿದ್ದಾರೆ. ನವೆಂಬರ್ 3ರಂದು ಸಭೆ ಆಯೋಜಿಸುವುದಾಗಿ ತಾಲೂಕು ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.