ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ನಾಲ್ಕು ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡಗಳು ಪದೇಪದೆ ಸಂಭವಿಸುತ್ತಿರುವ ಹಿನ್ನೆಲೆ, ನಗರದಲ್ಲಿರುವ ಪಬ್, ಹೋಟೆಲ್, ರೆಸ್ಟೋರೆಂಟ್, ಬೃಹತ್ ಮಳಿಗೆಗಳನ್ನು ಪರಿಶೀಲನೆ ನಡೆಸುವಂತೆ ಅಗ್ನಿಶಾಮಕ ಇಲಾಖೆ ಡಿಜಿ ಕಮಲ್ ಪಂತ್ ಅವರು ಇಲಾಖೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ.
ನಗರದಲ್ಲಿ ನಡೆದ ಸಾಲು ಸಾಲು ಅಗ್ನಿ ದುರಂತಗಳಲ್ಲಿ ಅತ್ತಿಬೆಲೆ ಪಟಾಕಿ ಅಗ್ನಿ ಅವಘಡದಲ್ಲಿ 17 ಜನ ಸಾವನ್ನಪ್ಪಿದ್ದರೆ, ರಾಸಾಯನಿಕ ಸೋರಿಕೆಯಿಂದ ನಗರದ ಚೋಳರಪಾಳ್ಯದಲ್ಲಿರುವ ಅಗರಬತ್ತಿ ಗೋದಾಮಿಗೆ ಬೆಂಕಿ ಹೊತ್ತಿ, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಜತೆಗೆ 5ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿವೆ. ಇನ್ನು ಲಗ್ಗೆರೆಯಲ್ಲಿ ಗುಜರಿ ಅಂಗಡಿಗೆ ಬೆಂಕಿ ಹೊತ್ತಿ ಅಪಾರ ಹಾನಿ ಉಂಟುಮಾಡಿದೆ. ಇದೀಗ ಅ.18ರಂದು ಕೋರಮಂಗಲದಲ್ಲಿರುವ ಪಬ್‌ವೊಂದಕ್ಕೆ ಬೆಂಕಿ ಹೊತ್ತಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಪ್ರಾಣ ಉಳಿಸಿಕ್ಕೊಳ್ಳಲು ಓರ್ವ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ನಗರದಲ್ಲಿ ಕೆಲವೆಡೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಕಂಪನಿ, ಅಂಗಡಿ, ಕಟ್ಟಡ ಸೇರಿದಂತೆ ಹಲವೆಡೆ ಬೆಂಕಿ ನಂದಿಸುವ ಸಲಕರಣೆಗಳನ್ನು ಹೊಂದದೆ ಇರುವುದು ಕಂಡುಬಂದಿದೆ. ಹಾಗಾಗಿ, ನಗರದ ಎಲ್ಲ ಬಹು ಮಹಡಿ ಕಟ್ಟಡಗಳು, ಅಪಾರ್ಟ್‌ಮೆಂಟ್, ಹೋಟೇಲ್, ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಬೇಕು” ಎಂದು ಕಮಲ್ ಪಂತ್ ಅವರು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಂಡನನ್ನು ತಾನೇ ಕೊಲೆ ಮಾಡಿ ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದ ಎರಡನೇ ಪತ್ನಿ
ಅ.20 ರಿಂದ ಅಗ್ನಿಶಾಮಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ನಗರದಲ್ಲಿರುವ ಕಟ್ಟಡಗಳ ಪರಿಶೀಲನೆ ನಡೆಸಲಿದ್ದಾರೆ. ಬೆಂಕಿ ನಂದಿಸುವ ಸಲಕರಣೆಗಳನ್ನು ಹೊಂದದ ಹಾಗೂ ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.