- ರಾಜಕೀಯ ಉದ್ದೇಶದಿಂದ ಯಡಿಯೂರಪ್ಪ ಸರ್ಕಾರದಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದರು
- ಎಫ್ಐಆರ್ ಹಾಕಿರುವುದು ಸರಿಯಲ್ಲ ಅಂತಾ ಕೋರ್ಟ್ ಮೊರೆ ಹೋಗಿದ್ದೆ: ಡಿಕೆಶಿ
ರಾಜಕೀಯ ಉದ್ದೇಶದಿಂದ ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದರು. ಶೇ 90ರಷ್ಟು ತನಿಖೆ ಮಾಡಿದ್ದೇವೆ ಅಂತಾ ಸಿಬಿಐನವರು ಹೇಳಿದ್ದಾರೆ. ಇನ್ನೂ ಒಂದು ದಿನ ಕೂಡ ನನ್ನನ್ನು ಕರೆಸಿ ವಿಚಾರಣೆ ಮಾಡಿಲ್ಲ. ನನ್ನ ಕುಟುಂಬ, ನಾನು, ನನ್ನ ಹೆಂಡತಿ ನನ್ನನ್ನೇ ವಿಚಾರಣೆಗೆ ಕೇಳಿಲ್ಲ. ಅದು ಹೇಗೆ ಶೇ 90ರಷ್ಟು ತನಿಖೆ ಮಾಡಿದ್ದಾರೆ ಗೊತ್ತಿಲ್ಲ. ನ್ಯಾಯಾಲಯದ ಮೇಲೆ ನಂಬಿಕೆ ಇದೆ, ನಾನು ಹೋರಾಟ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ತಮ್ಮ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, “ಎಫ್ಐಆರ್ ಹಾಕಿರುವುದು ಸರಿಯಲ್ಲ ಅಂತಾ ಕೋರ್ಟ್ ಮೊರೆ ಹೋಗಿದ್ದೆ. ಅವರದ್ದು ಏನೇ ಪ್ರೇರಿತ ಇದ್ದರೂ ಕೂಡ ನನಗೆ ಭರವಸೆ ಇದೆ. ನಾನು ಚೌಕಟ್ಟಿನಲ್ಲಿದ್ದೇನೆ, ಉತ್ತರ ಕೊಡುತ್ತೇನೆ” ಎಂದರು.
ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗ್ತಾರೆಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ತಿರುಗೇಟು ನೀಡಿದ ಅವರು, “6 ತಿಂಗಳು, ವರ್ಷದೊಳಗೆ ತಿಹಾರ್ ಜೈಲಿಗೆ ಕಳಿಸ್ತೇವೆ ಅಂತಾ ಹೇಳಿದ್ದಾರೆ. ಅವರದ್ದು ಪ್ರಿಪ್ಲ್ಯಾನ್ ಅಥವಾ ಇನ್ನೇನೋ ಇರಬಹುದು. ನಾನು ಓಡಿ ಹೋಗಲ್ಲ, ಕಾನೂನು ಚೌಕಟ್ಟಿನಲ್ಲಿ ಉತ್ತರ ಕೊಡುತ್ತೇನೆ. ಮೂರು ತಿಂಗಳಲ್ಲಿ ತನಿಖೆ ಮುಗಿಸ್ತೇವೆ ಅಂತಾ ಹೇಳಿದ್ದಾರೆ ಮಾಡಲಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ
ಕುಮಾರಸ್ವಾಮಿಗೆ ಬುದ್ಧಿ ಹೆಚ್ಚು ಕಡಿಮೆಯಾಗಿದೆ
ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, “ಕುಮಾರಸ್ವಾಮಿ ಗಂಟೆಗೊಂದು, ಗಳಿಗೆಗೊಂದು ಮಾತನಾಡಬಹುದು, ಅವರಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿ ಅವರು ಹಾಗೆಲ್ಲ ಮಾತನಾಡುತ್ತಿರಬಹುದು” ಎಂದು ಕುಟುಕಿದರು.
“ಕುಮಾರಸ್ವಾಮಿ ಅವರ ತಂದೆ 25 – 30 ವರ್ಷಗಳ ಹಿಂದೆ ರಾಮನಗರಕ್ಕೆ ಬಂದು ಎಂಎಲ್ಎ, ಪಿಎಂ ಸಹ ಆದರು. ನನ್ನ ವಿರುದ್ಧ ಎಂಪಿಗೂ ಅವರ ತಂದೆ ನಿಂತಿದ್ದರು. ಕುಮಾರಸ್ವಾಮಿ ಮತ್ತು ಅವರ ಧರ್ಮಪತ್ನಿ ಸಹ ನನ್ನ ವಿರುದ್ಧ ನಿಂತಿದ್ದರು. ನಾವೇ ಇಬ್ಬರು ನಿಂತು ಸರ್ಕಾರನೂ ಮಾಡಿದ್ವಿ. ಅವರನ್ನು ಹಾಸನಕ್ಕೆ ಕಳಿಸ್ತೀನಿ ಅಂತ ಹೇಳುವಷ್ಟು ಮೂರ್ಖ ನಾನಲ್ಲ” ಎಂದರು.
ಈಶ್ವರಪ್ಪಗೆ ತಿರುಗೇಟು
ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಉತ್ತರಿಸಿ, “ಬಹಳ ಸಂತೋಷ, ಬೇಗ ಆ ಕೆಲಸ ಮಾಡಲಿ. ತಡ ಮಾಡುವುದು ಬೇಡ. ಈಶ್ವರಪ್ಪ ಒಬ್ಬ ಜಡ್ಜ್ ಆಗಲಿ” ಎಂದು ವ್ಯಂಗ್ಯವಾಡಿದರು.