ಬಳ್ಳಾರಿ ಜಿಲ್ಲೆಯ ಬಳ್ಳಾರಿ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಸೆ.18, ಬುಧವಾರದಂದು ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ದಿನ ಪೂರ್ತಿ ಸರ್ವರ್ ಡೌನ್ ಸಮಸ್ಯೆ ಎದುರಾಗಿದ್ದರಿಂದ ಜನ ಸರತಿ ಸಾಲಿನಲ್ಲಿ ಕಾದು ಕಾದು ಹೈರಾಣಾಗಿದ್ದಾರೆ.
ಜಿಲ್ಲೆಯಲ್ಲಿನ ಗ್ರಾಮ ಒನ್ ಕೇಂದ್ರದಲ್ಲಿ ಹಾಗೂ ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಬಳ್ಳಾರಿ ಒನ್ ಕೇಂದ್ರದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ, ರೇಷನ್ ಕಾರ್ಡ್ ತಿದ್ದುಪಡಿ, ಗೃಹ ಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ನೂರಾರು ಜನ ಮುಗಿಬಿದ್ದರು.
ಗೃಹ ಲಕ್ಷ್ಮೀ ಯೋಜನೆಗೆ ಸೇರಿದಂತೆ ಮುಂತಾದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರ ರೇಷನ್ ಕಾರ್ಡ್‌ನಲ್ಲಿನ ತಪ್ಪು ಮಾಹಿತಿಯಿಂದ 2000 ರೂಪಾಯಿ ಹಣ ಜಮಾ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದ್ದರಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಜನರು ಪರದಾಡುವಂತಾಗಿದೆ.
ಅಕ್ಟೋಬರ್ 16, 17, 18ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಅವಕಾಶ ನೀಡಲಾಗಿತ್ತು. ಆದರೆ, ಮೂರು ದಿನಗಳ ಕಾಲ ಸರ್ವರ್ ಡೌನ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ, ಬುದವಾರದಂದು ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನವಾದ ಹಿನ್ನೆಲೆ ನೂರಾರು ಜನ ಬಳ್ಳಾರಿ ಒನ್ ಕೇಂದ್ರಕ್ಕೆ ಮುಗಿಬಿದ್ದರು.
ಬಳ್ಳಾರಿ ಒನ್ ಕೇಂದ್ರದಲ್ಲಿ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದ ಸರ್ವರ್ ಡೌನ್ ಆಗಿದೆ ಅದ್ದರಿಂದ ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆ, ಗೃಹ ಲಕ್ಷ್ಮಿ ನೋಂದಣಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಳ್ಳಾರಿ ಒನ್ ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ.
ಕೋಳೂರು ಗ್ರಾಮದಲ್ಲಿನ ಗ್ರಾಮ ಒನ್ ನಾಗರಿಕರ ಸೇವಾ ಕೇಂದ್ರದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸರ್ವರ್ ಸಮಸ್ಯೆ ಎದುರಾಗಿದೆ. ತಿದ್ದುಪಡಿಗೆ ಇನ್ನಷ್ಟು ಕಾಲಾವಕಾಶ ಕೊಡಬೇಕಿದೆ ಎಂದು ಆಪರೇಟರ್ ಮಹೇಶ್ ಕೇಳಿಕೊಂಡಿದ್ದಾರೆ.
ಇನ್ನು ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಶರಣ ಬಸಯ್ಯ, ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಸರ್ವರ್ ಡೌನ್ ಸಮಸ್ಯೆ ಎದುರಾಗಿರುವುದರಿಂದ ಅಕ್ಟೋಬರ್ 19ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದಿದ್ದಾರೆ.