ಮಂಗಳೂರಿನ ಪ್ರಸಿದ್ಧ ಮಂಗಳಾದೇವಿ ದೇವಾಲಯದಲ್ಲಿ ನಡೆಯುತ್ತಿರುವ ನವರಾತ್ರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಕರೆಕೊಟ್ಟಿತ್ತು. ಆದರೆ, ಆ ಕರೆಯಿಂದಾಗಿ ಮುಸ್ಲಿಂ ವ್ಯಾಪಾರಿಗಳಿಗೆ ಮಾತ್ರವಲ್ಲದೆ, ಹಿಂದು ವ್ಯಾಪಾರಿಗಳಿಗೂ ಆದಾಯ ಕ್ಷೀಣಿಸುವಂತೆ ಮಾಡಿದೆ. ಜಾತ್ರೆ ಆರಂಭವಾಗಿ ಮೂರು ದಿನಗಳು ಕಳೆದರೂ ವ್ಯಾಪಾರ ಇನ್ನೂ ಚುರುಕುಗೊಂಡಿಲ್ಲವೆಂದು ಜಾತ್ರೆಯಲ್ಲಿ ಅಂಗಡಿ ತೆರೆದಿರುವ ಹಿಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ವಿಎಚ್‌ಪಿ ನೀಡಿದ್ದ ಬಾಯ್‌ಕಾಟ್ ಕರೆಯ ಹೊರತಾಗಿಯೂ ಗುರುವಾರ ಹಿಂದು-ಮುಸ್ಲಿಂ ಸಮುದಾಯದ ಜನರು ಉಭಯ ಸಮುದಾಯದ ವ್ಯಾಪಾರಿಗಳ ಅಂಗಡಿಗಳಿಗೆ ಹೋಗಿದ್ದಾರೆ. ತಮ್ಮಿಷ್ಟದ ವಸ್ತುಗಳು, ಆಟಿಕೆಗಳು ಹಾಗೂ ತಿನಿಸುಗಳನ್ನು ಖರೀದಿಸಿದ್ದಾರೆ. ಯಾವ ಉದ್ದೇಶದಿಂದ ವಿಎಚ್‌ಪಿ ಬಾಯ್‌ಕಾಟ್ ಕರೆ ಕೊಟ್ಟಿತ್ತೋ ಆ ಉದ್ದೇಶವನ್ನು ಹುಸಿಗೊಳಿಸಿದ್ದಾರೆ.
ಆದರೆ, ಬಾಯ್‌ಕಾಟ್ ಕರೆಯ ಕಾರಣದಿಂದಾಗಿ ಜಾತ್ರೆಯು ವಿವಾದದ ತಾಣವಾಗಬಹುದೆಂದು ಹೆಚ್ಚಿನ ಜನರು ಇನ್ನೂ ಜಾತ್ರೆಯತ್ತ ಸುಳಿದಿಲ್ಲ. ಪರಿಣಾಮ ವ್ಯಾಪಾರ ಕಡಿಮೆಯಾಗಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ, ಜಾತ್ರೆಯ ಇನ್ನುಳಿದಿರುವ ದಿನಗಳಲ್ಲಿಯೂ ಹೆಚ್ಚು ವ್ಯಾಪಾರ ನಡೆಯುವ ಸಾಧ್ಯತೆಯಿಲ್ಲವೆಂದು ಅನೇಕ ಹಿಂದು ವ್ಯಾಪಾರಿಗಳು ಭಾವಿಸಿದ್ದಾರೆ.
”ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರದಲ್ಲಿ ಭಾರೀ ಕುಸಿತ ಕಂಡಿದೆ. ಈ ಹಿಂದೆ ಜಾತ್ರೆಗೆ ಸಾಕಷ್ಟು ಹಿಂದುಯೇತರ ಗ್ರಾಹಕರು ಬರುತ್ತಿದ್ದರು. ಆದರೆ, ಈ ಬಾರಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ” ಎಂದು ಜಾತ್ರೆಯಲ್ಲಿದ್ದ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಸಾಮಾನ್ಯವಾಗಿ, ಚಪ್ಪಲಿಗಳು, ಬಟ್ಟೆಗಳು, ಆಲಂಕಾರಿಕ ವಸ್ತುಗಳು ಇತ್ಯಾದಿಗಳು ಜಾತ್ರೆಗೆ ಹೆಚ್ಚು ಜನರನ್ನು ಸೆಳೆಯುತ್ತವೆ. ಆದರೆ, ಇವುಗಳನ್ನು ಹೆಚ್ಚಾಗಿ ಮಾರಾಟ ಮಾಡುವ ಹಲವು ಹಿಂದುಯೇತರ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ಮಳಿಗೆಗಳು ದೊರೆಯದ ಕಾರಣ, ಇಂತಹ ವಸ್ತುಗಳ ಮಳಿಗೆಗಳು ತುಂಬಾ ಕಡಿಮೆ ಇದೆ. ಹೀಗಾಗಿ, ಹೆಚ್ಚು ಗ್ರಾಹಕರು ಬರುತ್ತಿಲ್ಲವೆಂದು ಸ್ಥಳೀಯರು ಹೇಳುತ್ತಾರೆ.
ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಹಾವೇರಿ ಜಿಲ್ಲೆಯ ಹಿರೂರಿನ ಸಂಜೀವ್ ಸೇರಿದಂತೆ ಹಲವು ಮಾರಾಟಗಾರರು ಈ ಬಾರಿ ವ್ಯಾಪಾರ ವಹಿವಾಟು ಕ್ಷೀಣಿಸಿದೆ ಎಂದು ಹೇಳಿದ್ದಾರೆ.
ಗ್ರಾಹಕರು ವ್ಯಾಪಾರ ವಹಿವಾಟಿನಲ್ಲಿ ಧರ್ಮದ ತಾರತಮ್ಯ ಮಾಡುವುದಿಲ್ಲ. ವಿಎಚ್‌ಪಿ ಮತ್ತು ಬಜರಂಗದಳದ ಕರೆಗೆ ಜನರು ಮಹತ್ವ ನೀಡಿಲ್ಲ. ಎಲ್ಲರೂ ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ, ವ್ಯಾಪಾರ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದ್ದಾರೆ.
ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಯನ್ನು ಹಿಂದುವೆಂದು ಭಾವಿಸಿದ್ದ ಹಿಂದುತ್ವವಾದಿ ಕಾರ್ಯಕರ್ತ, ಆತನ ಮಳಿಗೆಗೆ ಕೇಸರಿ ಧ್ವಜವನ್ನು ಹಾಕಿದ್ದ. ಆದರೆ, ತಾನು ಹಿಂದು ಅಲ್ಲ ಎಂದು ವ್ಯಾಪಾರಿ ಹೇಳಿದ ಬಳಿಕ ನಯವಾಗಿ ಧ್ವಜವನ್ನು ತೆಗೆದುಕೊಂಡು ಹೋದನೆಂದು ತಿಳಿದುಬಂದಿದೆ.