ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿವಾದದ ನಂತರ ಕೆನಡಾ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂಪಡೆದಿದೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಲಾನಿ ಜೋಲಿ, ಕೆನಡಾವು ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ರಾಜತಾಂತ್ರಿಕರು ಹೊರಹೋಗದಿದ್ದಲ್ಲಿ ಶುಕ್ರವಾರದೊಳಗೆ ಅವರ ಅಧಿಕೃತ ಸ್ಥಾನಮಾನವನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಳ್ಳುವುದಾಗಿ ಭಾರತ ಬೆದರಿಕೆ ಹಾಕಿದೆ. ಈ ಕ್ರಮವು “ಅಸಮಂಜಸ ಮತ್ತು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ” ಎಂದು ಹೇಳಿದ್ದಾರೆ.
“ಭಾರತ ಕೈಗೊಂಡ ಪರಿಣಾಮಗಳ ಹಿನ್ನೆಲೆಯಲ್ಲಿ ನಮ್ಮ ರಾಜತಾಂತ್ರಿಕರ ಸುರಕ್ಷತೆಯ ದೃಷ್ಟಿಯಿಂದ ಭಾರತದಿಂದ ಸುರಕ್ಷಿತವಾಗಿ ನಿರ್ಗಮಿಸಲು ಅನುಕೂಲ ಮಾಡಿಕೊಟ್ಟಿದ್ದೇವೆ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್
“ನಾವು ರಾಜತಾಂತ್ರಿಕ ವಿನಾಯಿತಿಯ ಸಂಪ್ರದಾಯವನ್ನು ಮುರಿಯಲು ಅನುಮತಿಸಿದರೆ, ಭೂಗ್ರಹದಲ್ಲಿ ಎಲ್ಲಿಯೂ ಯಾವುದೇ ರಾಜತಾಂತ್ರಿಕರು ಸುರಕ್ಷಿತವಾಗಿರುವುದಿಲ್ಲ. ಆದ್ದರಿಂದ ಈ ಕಾರಣಕ್ಕಾಗಿ, ನಾವು ಪ್ರತೀಕಾರ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.
ಭಾರತದಲ್ಲಿ ಒಟ್ಟು 41 ರಾಜತಾಂತ್ರಿಕರೊಂದಿಗೆ 42 ಸಿಬ್ಬಂದಿ ಕೂಡ ಸೇವೆ ಸಲ್ಲಿಸುತ್ತಿದ್ದರು.
ಕೆನಡಾವು ಅಕ್ಟೋಬರ್ 10 ರೊಳಗೆ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಭಾರತವು ರಾಜತಾಂತ್ರಿಕ ವಿನಾಯಿತಿಯನ್ನು ರದ್ದುಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು ಹಾಗಾಗಿ ಕೆನಡಾ ಒಟ್ಟು 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ.
ಜೂನ್‌ನಲ್ಲಿ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ನಂತರ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸಂಭವಿಸಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಗೂಢಚಾರಿಗಳ ಪಾತ್ರವಿದೆ ಎಂದು ಕೆನಡಾ ಆರೋಪಿಸಿದ ನಂತರ ಬಿಕ್ಕಟ್ಟು ಉಲ್ಬಣಗೊಂಡಿದೆ.