ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಅಡಿಯಲ್ಲಿ ನಿಯಮ ಉಲ್ಲಂಘಿಸಿದ ವ್ಯಾಪಾರ ಸಂಸ್ಥೆಗಳ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಭಾರೀ ದಂಡ ವಿಧಿಸಿದ್ದಾರೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಅಡಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಪಾಲಿಕೆಯ ಎಂಟು ವಲಯಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಎಂಟು ವಲಯಗಳಲ್ಲಿರುವ 13 ವ್ಯಾಪಾರ ಸಂಸ್ಥೆಗಳನ್ನು ಪಾಲಿಕೆ ಬುಧವಾರ ಬಂದ್ ಮಾಡಿದೆ.
“ಜತೆಗೆ, ಕಾಯಿದೆ ಉಲ್ಲಂಘನೆ ಮಾಡಿದ್ದಕ್ಕಾಗಿ ಒಟ್ಟು 50 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪಿತಸ್ಥರಿಂದ ಸುಮಾರು ₹50,000 ದಂಡ ಸಂಗ್ರಹಿಸಲಾಗಿದೆ. ಕಾಯಿದೆ ಉಲ್ಲಂಘನೆ ಪತ್ತೆಗೆ ಸಿಒಟಿಪಿಎ ಉಲ್ಲಂಘನೆ ವಿರುದ್ಧ ನಗರ ಪೊಲೀಸರ ವಿಶೇಷ ಅಭಿಯಾನ ನಡೆಸಿದ್ದಾರೆ” ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ಕೆ.ವಿ.ತ್ರಿಲೋಕ್ ಚಂದ್ರ ತಿಳಿಸಿದರು.
“ವಾರಾಂತ್ಯದಲ್ಲಿ ಪಬ್ಗಳು, ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಲ್ಲಿ ಜನಸಂದಣಿ ಇರುತ್ತದೆ. ಹಾಗಾಗಿ, ಕೂಡಲೇ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ದಾಳಿ ನಡೆಸಿದ ಅಧಿಕಾರಿಗಳು ವ್ಯಾಪಾರ ಸ್ಥಳಗಳಲ್ಲಿ ಸಿಒಟಿಪಿಎ ನಿಯಮಗಳ ಅನುಸರಣೆ ಆಗಿದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ” ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
“ರೆಸ್ಟೋರೆಂಟ್ಗಳು, ಪಬ್ಗಳು ಮತ್ತು ಕೆಫೆಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಹಲವು ಬಾರಿ ದೂರುಗಳನ್ನು ಸ್ವೀಕರಿಸಿದ್ದೇವೆ. ಇತ್ತೀಚೆಗೆ, ನಗರ ಪೊಲೀಸರು ನೂರಾರು ಸ್ಥಳಗಳ ಮೇಲೆ ದಾಳಿ ನಡೆಸಿದರು. ನಿಯಮಗಳನ್ನು ಅನುಸರಿಸದ ಮತ್ತು ‘ಧೂಮಪಾನ ನಿಷೇಧ ವಲಯ’ ಎಂಬ ಫಲಕಗಳನ್ನು ಹಾಕದೆ ಇರುವ ಐದು ಸಂಸ್ಥೆಗಳನ್ನು ಮುಚ್ಚಲಾಗಿದೆ. ಜತೆಗೆ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳು ಮಾರ್ಗಸೂಚಿಗಳಿಗೆ ಬದ್ಧವಾಗಿದೆಯೇ ಎಂದು ಪರಿಶೀಲಿಸಿದರು” ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುತ್ತಿಗೆದಾರನನ್ನು ಕಿಡ್ನ್ಯಾಪ್ ಮಾಡಿ ₹3 ಕೋಟಿ ಚೆಕ್ ಪಡೆದ ಬಿಬಿಎಂಪಿ ಮಾಜಿ ಕಾರ್ಪೋರೇಟರ್
ಕೆಲ ದಿನಗಳ ಹಿಂದೆ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು, “ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಕುರಿತು ಎಚ್ಚರಿಕೆ ನೀಡಿದ್ದಲ್ಲದೆ, ಧೂಮಪಾನದ ದುಷ್ಪರಿಣಾಮಗಳ ಕುರಿತು ಕೈಪಿಡಿ ಬಿಡುಗಡೆ ಮಾಡಿ, ಸಿಒಟಿಪಿಎ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಪೊಲೀಸರು ನಗರದಾದ್ಯಂತ 1,000ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಎರಡು ವಾರಗಳಲ್ಲಿ 950 ಪ್ರಕರಣಗಳನ್ನು ದಾಖಲಿಸಿದ್ದಾರೆ” ಎಂದು ಹೇಳಿದ್ದರು.