- ‘ಎಟಿಎಂ ಸರ್ಕಾರ’ ಎಂದು ಕಾಂಗ್ರೆಸ್ ವಿರುದ್ಧ ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ
- ಬಿಜೆಪಿ ಆರೋಪಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ಎಲ್ಲ ಎಟಿಎಂಗಳು ಬಿಜೆಪಿ ಅವರದ್ದೇ ಆಗಿವೆ. ಹೀಗಾಗಿಯೇ ಜನರು ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ರಾಜ್ಯದ ಜನತೆ ಬಿಜೆಪಿ ತಿರಸ್ಕರಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬಿಜೆಪಿಯಿಂದ ‘ಎಟಿಎಂ ಸರ್ಕಾರ’ ಎಂದು ಕಾಂಗ್ರೆಸ್ ವಿರುದ್ಧ ಪೋಸ್ಟರ್ ರಿಲೀಸ್ ಮಾಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಬಿಜೆಪಿ ಮುಖಂಡರು, ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಇಂತಹ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ” ಎಂದರು.
ಈ ಹೇಳಿಕೆ ನೀಡುವ ಮುನ್ನ ಬೆಳಗ್ಗೆಯೂ ಕುಮಾರಕೃಪ ಅತಿಥಿಗೃಹದ ಬಳಿ ಬಿಜೆಪಿಗೆ ತಿರುಗೇಟು ನೀಡಿದ್ದ ಡಿಕೆ ಶಿವಕುಮಾರ್, “ರಾಜಕೀಯ ಉದ್ದೇಶಕ್ಕಾಗಿಯೇ ಯಡಿಯೂರಪ್ಪ ಅವರು ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದರು. ಬಿಜೆಪಿ ಪಕ್ಷದ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಬೇರೆಯವರದ್ದನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದ್ದೇಕೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಲದ ಗುಂಡಿಗೆ ಮನುಷ್ಯರನ್ನು ಇಳಿಸುವುದು ‘ವಿಶ್ವಗುರು’ವಿಗೆ ಶೋಭೆಯಲ್ಲ
“ಅಡ್ವೋಕೇಟ್ ಜನರಲ್ ಅವರೇ ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪೀಕರ್ ಬಳಿಯೂ ತೆಗೆದುಕೊಂಡು ಹೋಗದೆ ಯಡಿಯೂರಪ್ಪ ಅವರು ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು. ಸಿಬಿಐ ಅವರು ಶೇ 90 ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದಾರೆ. ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚೆ ಮಾಡುತ್ತೇನೆ” ಎಂದು ಹೇಳಿದರು.