ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರದ ವತಿಯಿಂದ ಆಚರಿಸಲಾಗುವ ರಾಜ್ಯೋತ್ಸವದ ವೇಳೆ ಐದು ಕನ್ನಡ ಗೀತೆಗಳನ್ನು ಹಾಕುವುದನ್ನು ಕಡ್ಡಾಯಗೊಳಿಸಿದೆ.
- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಹುಯಿಳಗೋಳ ನಾರಾಯಣ ರಾಯರು
- ಎಲ್ಲಾದರೂ ಇರು ಎಂತಾದರು ಇರು – ಕುವೆಂಪು
- ಒಂದೇ ಒಂದೇ ಕರ್ನಾಟಕ ಒಂದೇ – ದ.ರಾ. ಬೇಂದ್ರೆ
- ಹೊತ್ತಿತೋ ಹೊತ್ತಿತು ಕನ್ನಡ ದೀಪ – ಸಿದ್ದಯ್ಯ ಪುರಾಣಿಕ
- ಹೆಸರಾಯಿತು ಕರ್ನಾಟಕ – ಚನ್ನವೀರ ಕಣವಿ
ಎಂಬ ಐದು ಕನ್ನಡ ಹಾಡುಗಳನ್ನು ಹಾಕುವಂತೆ ಆದೇಶಿಸಿದ ಸರ್ಕಾರ ಆದೇಶಿಸಿದೆ.
ಆದೇಶದಲ್ಲಿ, ನವೆಂಬರ್ ಒಂದರಂದು ರಾಜ್ಯದ ಎಲ್ಲೆಡೆ ಆಚರಿಸುವ ರಾಜೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ 50 ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ ಐದು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಎಲ್ಲ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ (ಗೀತ ಗಾಯನ) ಸಲ್ಲಿಸುವುದು ಸರ್ಕಾರದ ಉದ್ದೇಶವಾಗಿರುತ್ತದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24ನೇ ಸಾಲಿನ ಆಯವ್ಯಯದಲ್ಲಿ “ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 1ನೇ ನವೆಂಬರ್ 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ ಕನ್ನಡಿಗ ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಘೋಷಣೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ 2023 ನವೆಂಬರ್ 01 ರಿಂದ 2024ರ ನವೆಂಬರ್‌ವರೆಗೆ ರಾಜ್ಯಾದ್ಯಂತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಲ್ಲದೇ, ಕರ್ನಾಟಕ ಸಂಭ್ರಮ- 50 ಅಭಿಯಾನದ ಲಾಂಛನವನ್ನು ಕೂಡ ಬಿಡುಗಡೆಗೊಳಿಸಿದ್ದು, ಈ ಲಾಂಛನವನ್ನು ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಬ್ಯಾನರ್ ಹಾಗೂ ಪತ್ರಗಳ ಮೇಲೆ ಮುದ್ರಿಸಿ ಉಪಯೋಗಿಸುವಂತೆ ಸೂಚಿಸಲಾಗಿದೆ.
ಈಗ ಇದರ ಮುಂದಿನ ಭಾಗವಾಗಿ ಐದು ಕನ್ನಡ ಗೀತೆಗಳನ್ನು ಹಾಕುವುದನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, ರಾಜ್ಯದ ಎಲ್ಲಾ ಜಿಲ್ಲಾಮಟ್ಟ, ತಾಲೂಕು ಮಟ್ಟ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನವೆಂಬರ್ 01 ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮ ವೇಳಾಪಟ್ಟಿಯಲ್ಲಿರುವಂತೆ ಧ್ವಜಾರೋಹಣ, ರಾಷ್ಟ್ರ ಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಕ್ರಮವಾಗಿ ಸರ್ಕಾರ ಸೂಚಿಸಿರುವ ಐದು ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ಸೂಚಿಸಿದೆ.
ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳು, ಸರ್ಕಾರಿ, ಅರೆಸರ್ಕಾರಿ, ನಿಗಮ ಮಂಡಳಿಗಳ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಸಂಘ ಸಂಸ್ಥೆಗಳು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಇದನ್ನು ಅಳವಡಿಸಿಕೊಂಡು ಕಡ್ಡಾಯವಾಗಿ ಮೇಲಿನ ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿ ನಮನ (ಗೀತ ಗಾಯನ) ಸಲ್ಲಿಸುವಂತೆ ತಿಳಿಸಲಾಗಿದೆ.
ಈ ಐದು ಹಾಡುಗಳಿಗೆ ಸಂಬಂಧಿಸಿದ ಆಡಿಯೋ ಲಿಂಕ್ ಅನ್ನು ಹಾಗೂ ಲಾಂಛನದ ಡಿಜಿಟಲ್ ಪ್ರತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಮೂಲಕ ನೀಡುತ್ತದೆ ಎಂದು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ.