ದೊಡ್ಡ ದೊಡ್ಡ ಹಳ್ಳ, ಕೊಳ್ಳ ಅಥವಾ ನದಿಗಳು ಹರಿಯುವಾಗ, ಜನರ ಓಡಾಟಕ್ಕಾಗಿ ಆ ಕಡೆಯಿಂದ ಈ ಕಡೆಗೆ ಬರಲು ಎಂಜಿನಿಯರ್‌ಗಳು ಪ್ಲಾನ್ ತಯಾರಿಸಿ ಸೇತುವೆ ನಿರ್ಮಾಣ ಮಾಡುವುದನ್ನು ನೋಡಿರ್ತಿವಿ, ಕೇಳಿರ್ತಿವಿ. ಆದರೆ ರೈತರೇ ಎಂಜಿನಿಯರ್‌ಗಳಾಗಿ ನದಿಗೆ ಸೇತುವೆ ಕಟ್ಟಿರುವುದನ್ನು ನಂಬ್ತಿರಾ? ನೀವು ನಂಬಲೇಬೇಕು.
ಇಂತಹದೊಂದು ಸವಾಲನ್ನು ಸ್ವೀಕರಿಸಿದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ರೈತರು, ತಮ್ಮ ಜಮೀನುಗಳಿಗೆ ಹೋಗಲು, ಬೆಳೆದ ಬೆಳೆಗಳನ್ನು ಸಾಗಿಸಲು ಸಮಸ್ಯೆ ಎದುರಾದಾಗ, ರೈತರೇ ಎಂಜಿನಿಯರ್‌ಗಳಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್ ಬ್ರಿಡ್ಜ್ (ಸೇತುವೆ) ನಿರ್ಮಿಸಲು ಮುಂದಾಗಿದ್ದಾರೆ.
ಗುಹೇಶ್ವರ ನಡುಗಡ್ಡೆ
ಕೃಷ್ಣಾ ನದಿ ಸುತ್ತುವರೆದು ನಡುವೆ ದ್ವೀಪದಂತೆ ಕಾಣುತ್ತಿರುವುದೇ ಗುಹೇಶ್ವರ ನಡುಗಡ್ಡೆ. ಇಲ್ಲಿ ಗುಹೇಶ್ವರ ದೇವಸ್ಥಾನವಿದೆ. ಕಂಕನವಾಡಿ ಗ್ರಾಮದ ರೈತರ ಸುಮಾರು 500ರಿಂದ 600 ಎಕರೆ ಜಮೀನು ಈ ಗುಹೇಶ್ವರ ನಡುಗಡ್ಡೆಯಲ್ಲಿ ಇದೆ. ಈ ಜಮೀನುಗಳಲ್ಲಿಯೇ ಬೆಳೆಗಳನ್ನು ಬೆಳೆಯುತ್ತಾ ಹೆಚ್ಚು ಜನರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.
ಸಮಸ್ಯೆಗಳೇನು?
1980ರ ಹಿಂದೆ ಈ ನಡುಗಡ್ಡೆ ಬಂಗಾರದಂತ ಭೂಮಿ, ಏನೇ ಬೆಳೆ ಬೆಳೆದರೂ ಬಂಗಾರದಂತಹ ಬೆಳೆ ಬರುತ್ತದೆ. ಆದರೆ ಬೆಳೆದ ಬೆಳೆಗಳನ್ನು ಸಾಗಿಸಲು ಹಾದಿ ಇಲ್ಲ. ಇಲ್ಲಿ ವಾಸಿಸುವ ರೈತರು ಕೃಷ್ಣಾ ನದಿ ದಾಟಿ ಕಂಕನವಾಡಿ ಗ್ರಾಮಕ್ಕೆ ಅಥವಾ ಪಟ್ಟಣಕ್ಕೆ ಹೋಗಬೇಕೆಂದರೆ ಯಾವುದೇ ಹಾದಿಯಿಲ್ಲ. ಆಗಿನ್ನೂ ಗಲಗಲಿ ಡ್ಯಾಮು, ಆಲಮಟ್ಟಿ ಡ್ಯಾಮು ಕಟ್ಟದೇ ಇದ್ದುದರಿಂದ ನೀರು ಸೊಂಟ ಮಟ್ಟ, ಎದೆ ಮಟ್ಟ ಬರುತ್ತಿತ್ತು. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ, ಗಂಡುಮಕ್ಕಳು ಈಜು ಹೋಗುತಿದ್ದರು, ಬರುತ್ತಿದ್ದರು. ಹೆಣ್ಣು ಮಕ್ಕಳನ್ನು ಕೈ ಕೈ ಬಿಗಿ ಹಿಡಿದುಕೊಂಡು ನಿಧಾನವಾಗಿ ನದಿ ದಾಟಿಸುತ್ತಿದ್ದರು. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ದಾಟುತ್ತಿದ್ದರು. ಎಮ್ಮೆ, ದನಕರುಗಳು ಮುಂದೆ ಈಜಿಕೊಂಡು ಹೋದರೆ ಅವುಗಳ ಬಾಲ ಹಿಡಿದುಕೊಂಡು ಆ ಕಡೆ ದಡಕ್ಕೆ ದಾಟುತ್ತಿದ್ದರು. ರೈತರು ಬೆಳೆ ಬೆಳೆದ ಕಾಳುಗಳ ಚೀಲಗಳನ್ನು ತಲೆ ಮೇಲೆ ಹೊತ್ತು ನಡಕೊಂಡು ನದಿ ದಾಟಿ ಕಂಕನವಾಡಿಗೆ ಬಂದು, ಅಲ್ಲಿಂದ ಜಮಖಂಡಿಗೆ ಹೋಗಿ ಬೆಳೆಗಳನ್ನು ಮಾರಾಟ ಮಾಡುತ್ತಿದ್ದರು.
ಬೆಲ್ಲದ ಗಂಗಾಳದಾಗ ಬೆಲ್ಲ ತರ್ತಿದ್ರು
1980ರ ನಂತರ ಇತ್ತೀಚೆಗೆ ಸಣ್ಣ ಸಣ್ಣ ಬೆಳೆಗಳನ್ನು ಬೆಳೆಯೋದು ಕಡಿಮೆ ಮಾಡಿ, ಹೆಚ್ಚೆಚ್ಚು ಕಬ್ಬು ಬೆಳೆಯಲು ಆರಂಭಿಸಿದರು. ಗಾಣದ ಮನೆ(ಬೆಲ್ಲ ತಯಾರಿಸುವ ಘಟಕ)ಗಳೂ ಆರಂಭವಾದವು. ಗಾಣದಿಂದ ತಯಾರಾದ ಬೆಲ್ಲದ ಪೆಟ್ಟಿಗಳನ್ನ ಕೃಷ್ಣಾ ನದಿಯಿಂದ ದಾಟಿಸೋಕೆ ಬೆಲ್ಲದ ಗಂಗಾಳ ಉಪಯೋಗ ಮಾಡುತ್ತಿದ್ದರು. ಗುಹೇಶ್ವರ ನಡುಗಡ್ಡೆಯ ರೈತರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಆಳುಗಳನ್ನು ಕರೆತರಲು ಈ ಬೆಲ್ಲದ ಗಂಗಾಳದ ಸಹಾಯ ಪಡೆಯುತ್ತಿದ್ದರು. ಒಮ್ಮೆ ಆಳುಗಳನ್ನು ಕೃಷ್ಣಾ ನದಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ನೀರಿನ ಸೆಳವಿಗೆ ಸಿಕ್ಕು ಏಳು ಮಂದಿ ನೀರುಪಾಲಾಗಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
1984-85ರ ಕಾಲದಲ್ಲಿ ಸರ್ಕಾರ ಈ ಕಂಕನವಾಡಿ ಗ್ರಾಮದಿಂದ ಕೃಷ್ಣಾ ನದಿ ದಾಟಿ ನಡುಗಡ್ಡೆಗೆ ಹೋಗಲು ಒಂದು ದೋಣಿ ಕೊಟ್ಟಿತ್ತು. ಆ ದೋಣಿ ಆಗಿನ ಸಮಯದಲ್ಲಿ ದೊಡ್ಡ ಅನುಕೂಲವಾಯಿತು. ಆ ದೋಣಿಯಿಂದ ರೈತರ ಜಮೀನುಗಳಿಗೆ ಆಳುಗಳನ್ನು ಕರೆದುಕೊಂಡು ಹೋಗಲು, ಮಕ್ಕಳನ್ನು ಶಾಲೆಗೆ, ಪಟ್ಟಣಗಳಿಗೆ ಬರೋಕೆ ಹೋಗೋಕೆ ದೊಡ್ಡ ಅನುಕೂಲವಾಯಿತು.
ನಾವಣಿಯಲ್ಲಿ ಕಬ್ಬು ಸಾಗಣೆ
“ಎರಡುಮೂರು ವರ್ಷಗಳಿಂದ ಗುಹೇಶ್ವರ ನಡುಗಡ್ಡೆಯಲ್ಲಿರುವ ರೈತರ ಜಮೀನುಗಳಲ್ಲಿ ಕಬ್ಬುಗಳನ್ನು ಕಡಿದು ಕೃಷ್ಣಾ ನದಿಯ ದಂಡಿ ಮೇಲೆ ಒಟ್ಟಿ, ಅಲ್ಲಿಂದ ನಾವಣಿಯಲ್ಲಿಟ್ಟುಕೊಂಡು ನದಿ ದಾಟಿ ಈ ಕಡೆ ಬರುತ್ತಿದ್ದೆವು. ವರ್ಷಗಳು ಉರುಳಿದಂತೆ ಕಬ್ಬು ಬೆಳೆಗಾರರು ಹೆಚ್ಚಾದರು. ಕಬ್ಬಿನ ಗಾಣಗಳು ಕಡಿಮೆ ಆದವು. ನಾವಣಿಯಲ್ಲಿ ಕಬ್ಬು ತರಲು ಹೆಚ್ಚು ಆಳುಗಳು ಬೇಕಾಗುತ್ತಿತ್ತು. ಹಾಗೆಯೇ ₹700ರಿಂದ ₹800ರಷ್ಟು ಖರ್ಚು ಹೆಚ್ಚಾಗಿದ್ದರಿಂದ ರೈತರಿಗೆ ಅಷ್ಟಕ್ಕೆ ಅಷ್ಟೇ ಆದಾಯ ಬರುತ್ತಿತ್ತು. ಹೀಗಾದರೆ ನಾವು(ರೈತರು) ಬದುಕುವುದು ಕಷ್ಟವಾಗುತ್ತದೆ. ಇದಕ್ಕೆ ಏನಾದರೂ ಪರಿಹಾರ ಹುಡಕಲೇಬೇಕು ಅಂದಾಗ ರೈತರು ಎಂಜನಿಯರ್ ಆಗೋಕೆ ಆಲೋಚನೆ ಮಾಡಿದೆವು” ಎಂದು ರೈತರು ಹೇಳಿದರು.
ಬ್ಯಾರಲ್ ಬ್ರಿಡ್ಜ್(ಸೇತುವೆ) ಆಲೋಚನೆ ಹೇಗೆ ಬಂತು?
ನಾವಣಿಯಲ್ಲಿ ಕಬ್ಬು ತರಲು ವೆಚ್ಚ ಹೆಚ್ಚಾಗಿದ್ದರಿಂದ ರೈತರೆಲ್ಲ ಸೇರಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಊರಿನ ಹಿರಿಯರ ಬಳಿ ಹೋಗಿ, “ಕೃಷ್ಣಾ ನದಿಗೆ ಬ್ಯಾರಲ್ ಬ್ರಿಡ್ಜ್ ಕಟ್ಟಬೇಕೆಂದು ತೀರ್ಮಾನಿಸಿದ್ದೇವೆಂದು ಹೇಳಿದಾಗ, ಹಿರಿಯರು ʼಹುಚ್ಚಪ್ಪಂದಿರಾ ಇದನ್ನೆಲ್ಲ ಮಾಡಿ ಕೈ ಸುಟ್ಗೊಳ್ತಿರಿ, ಏನೂ ಮಾಡಬ್ಯಾಡಿʼರೆಂದು ಬುದ್ಧಿ ಹೇಳಿದರು” ಎಂದು ಯುವ ರೈತ ಮುಖಂಡ ಈಶ್ವರ ಕಡಬಸವ ಈ ದಿನ.ಕಾಮ್‌ಗೆ ತಿಳಿಸಿದರು.
“ಗುಹೇಶ್ವರ ಜಾತ್ರ್ಯಾಗ ಈ ಕೃಷ್ಣಾ ನದಿ ಮಧ್ಯದಲ್ಲಿ ನೂರು ಬ್ಯಾರಲ್ ಸೇರಿಸಿ, ʼವಾಟರ್ ಫೌಂಟೇನ್ʼ ಮಾಡಿದ್ವಿ. ಇದನ್ನು ಪ್ರತಿ ವರ್ಷವೂ ಮಾಡ್ತಿವಿ. ಇಷ್ಟು ಬ್ಯಾರಲ್ ಜೋಡಿಸಿದರೆ ಇಷ್ಟೊಂದು ಭಾರ ಹೊರ್ತೈತಿ ಅನ್ನೋದು ಗೊತ್ತಾತು. ಈ ಐಡಿಯಾದ ಆಧಾರದಾಗ ಬ್ಯಾರಲ್ ಬ್ರಿಡ್ಜ್ ಮಾಡಬಹುದು ಅನ್ನೋದು ಖಾತರಿ ಆದಮೇಲೆ ನಾವೆಲ್ಲರೂ ಕೈಜೋಡಿಸಿ ಬ್ಯಾರಲ್ ಬ್ರಿಡ್ಜ್ ನಿರ್ಮಾಣಕ್ಕೆ ತಯಾರಾದೆವು” ಎಂದು ಹೇಳಿದರು.
ಬ್ಯಾರಲ್ ಬ್ರಿಡ್ಜ್ ಮಾಡೋಕೆ ತಗುಲಿದ ವೆಚ್ಚ
“ಕಂಕನವಾಡಿ ಗ್ರಾಮದ ರೈತರೆಲ್ಲರನ್ನೂ ಪಟ್ಟಿ ಮಾಡಿ, ಕಡಿಮಿ ಆದ್ರ ಗುಡಿ ರೊಕ್ಕ ಹಾಕಿ ಮಾಡೋಣ ಅಂತ ತಯಾರಾದ್ರು. ಈ ಬ್ಯಾರಲ್ ಬ್ರಿಡ್ಜ್‌ಗೆ ಒಟ್ಟು 15 ಟನ್ ಕಬ್ಬಿಣ, 300 ಬ್ಯಾರಲ್ ಉಪಯೋಗಿಸಿ ಬ್ಯಾರಲ್ ಬ್ರಿಡ್ಜ್ ತಯಾರಿಸಿದ್ದು, ಒಟ್ಟು ಇದಕ್ಕೆ 25 ಲಕ್ಷ ರೂಪಾಯಿ ಖರ್ಚಾಗಿದೆ” ಎಂದು ಹೇಳಿದರು.
“ನಾವು ಯುವಕರೆಲ್ಲರೂ ಸೇರಿ ಈ ಬ್ಯಾರಲ್ ಬ್ರಿಡ್ಜ್ ಮಾಡಿದೆವು. ಇದಕ್ಕ ನಾವೇ ಎಂಜಿನಿಯರ್, ನಾವು ಸೇತುವೆ ಮಾಡೋಣ ಅಂತ ಪ್ಲಾನ್ ಮಾಡಿ, ಗೆಳೆಯರೆಲ್ಲ ಸೇರಿ ಎಷ್ಟು ಕಬ್ಬಿಣ, ಎಷ್ಟು ಬ್ಯಾರಲ್ ಬೇಕು, ಎಷ್ಟು ಬಜೆಟ್ ಬೇಕು ಅಂತ ಪ್ಲಾನ್ ಮಾಡಿ, ಒಬ್ಬ ಮೇಸ್ತ್ರಿ ಹಿಡ್ಕಂಡು ಬ್ಯಾರಲ್ ಬ್ರಿಡ್ಜ್ ನಿರ್ಮಾಣ ಮಾಡಿದೆವು” ಎಂದರು.
ಇದನ್ನೂ ಓದಿದ್ದೀರಾ? ಬಾಗಲಕೋಟೆ | ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ; ಗರ್ಭಿಣಿ ಮತ್ತು ಮಕ್ಕಳು ಅಸ್ವಸ್ಥ
ವಿದ್ಯಾರ್ಥಿ ಮಲ್ಲಿಕಾರ್ಜುನ ಅಲಬಾಳ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಆ ಕಡೆಯಿಂದ ಈ ಕಡೆಗೆ ಬರೋಕೆ ಬಾಳ ಕಷ್ಟ ಆಗ್ತಿತ್ತು. ಶಾಲೆಗೆ ತಡ ಆಗಿ ಹೋಗ್ತಿದ್ವಿ. ಈಗ ಈ ಬ್ಯಾರಲ್ ಬ್ರಿಡ್ಜ್ ನಿರ್ಮಾಣದಿಂದ ಶಾಲೆಗೆ ಲಗೂನ ಹೊಂಟೀವಿ” ಎಂದು ಸಂತಸ ವ್ಯಕ್ತಪಡಿಸಿದರು.
ಬ್ಯಾರಲ್ ಬ್ರಿಡ್ಜ್ ತಯಾರಿಸಿದ ಮೇಸ್ತ್ರಿ ಬಸಪ್ಪ ಕೊರವಾನ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಈ ಬ್ಯಾರಲ್ ಬ್ರಿಡ್ಜ್ ಕೆಲಸ ಒಂದೂವರೆ ತಿಂಗಳಿಂದ ಚಾಲೂ ಐತಿ. ಇನ್ನೊಂದು ವಾರದಲ್ಲಿ ಎಲ್ಲ ಕೆಲಸ ಚೊಕ್ಕವಾಗಿ ಮುಗಿತೈತಿ. ಈ ಬ್ರಿಡ್ಜ್ ಮೇಲೆ 15 ಟನ್ ಭಾರ, ಎರಡು ಸಾವಿರ ಮಂದಿ ನಿತ್ಯವೂ ಓಡಾಡಬಹುದು” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.