ರಾಜ್ಯದಲ್ಲಿ ಬೆಳಗಾವಿ ರಾಜಕಾರಣದಲ್ಲಾಗುತ್ತಿರುವ ಕೆಲ ಬೆಳವಣಿಗೆಗಳ ಬಗ್ಗೆ ಮತ್ತೆ ಹೇಳಿಕೆ ನೀಡಿರುವ ಲೋಕೋಪಯೋಗಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ‘ನಮ್ಮ ಸರ್ಕಾರವು ಸುರಕ್ಷಿತವಾಗಿದೆ. ಏನೂ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಸಮಾಧಾನ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ‘ವಿಮಾನ ಹಾರಾಡುವಾಗ ಜೋರಾದ ಗಾಳಿಗೆ ಸ್ವಲ್ಪ ಮೇಲೆ ಕೆಳಗೆ ಅಲ್ಲಾಡುತ್ತದೆ. ಅಷ್ಟಕ್ಕೇ ಏನೂ ಆಗುವುದಿಲ್ಲ. ಸುರಕ್ಷಿತವಾಗಿರುತ್ತದೆ. ನಮ್ಮ ಸರ್ಕಾರವೂ ಸುರಕ್ಷಿತವಾಗಿರುತ್ತದೆ. ಏನೂ ಆಗುವುದಿಲ್ಲ’ ಎಂದು ಹೇಳಿದರು.
‘ಕೆಲವೊಮ್ಮೆ ನಮ್ಮ ಲೆಕ್ಕಾಚಾರಗಳು ಕೂಡ ಫೇಲ್ ಆಗುತ್ತವೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಮೈಸೂರು ಪ್ರವಾಸಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನ್ನ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಭಿನ್ನಾಭಿಪ್ರಾಯ ಏನೂ ಇಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ನನ್ನ ಸಹೋದರ ಲಖನ್ ಜಾರಕಿಹೊಳಿ ಅವರ ವಿರುದ್ಧವಾಗಿ, ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಿದ್ದೇವೆ’ ಎಂದು ಇದೇ ವೇಳೆ ನೆನಪಿಸಿದರು.
‘ಜಿಲ್ಲೆಯಲ್ಲಿ ವರ್ಗಾವಣೆ ವಿಚಾರ ದೊಡ್ಡದೇನಲ್ಲ. ವಿವಾದ ಮಾಡುವಂತಹ ವಿಷಯವೂ ಅಲ್ಲ. ಸಣ್ಣಸಣ್ಣ ವಿಷಯಗಳಿಗೆ ನಾನು ತಲೆಕೆಡಿಸಿಕೊಳ್ಳುವವನಲ್ಲ. ಗುಂಪು ಕಟ್ಟಿಕೊಂಡು ಪಕ್ಷದ ನಾಯಕರಿಗೆ ಸಂದೇಶ ರವಾನೆ ಮಾಡುವ ಉದ್ದೇಶ ನನಗಿಲ್ಲ. ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಬಿಜೆಪಿ, ಜೆಡಿಎಸ್ನಲ್ಲಿ ಯಾವುದೂ ಸರಿ ಇಲ್ಲ ಎಂದು ನಾವೂ ಹೇಳುತ್ತೇವೆ. ನಮ್ಮಲ್ಲಿ ಸಮಸ್ಯೆ ಆಲಿಸಲು ಪಕ್ಷದ ಅಧ್ಯಕ್ಷರಿದ್ದಾರೆ, ಮುಖ್ಯಮಂತ್ರಿ ಇದ್ದಾರೆ. ಚುನಾವಣೆ ಬಂದಾಗ ಎಲ್ಲರೂ ಒಂದಾಗಿ ಹೋಗುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
‘ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಬದಲು ಬೇರೆಯವರನ್ನು ಮಾಡಿ ಎಂದು ನಾನೇ ಖುದ್ದು ಹೇಳಿದ್ದೇನೆ. ಯಾರನ್ನು ಮಾಡಬೇಕು, ಯಾರನ್ನು ಮಾಡಬಾರದು ಎಂಬ ವಿಚಾರಕ್ಕೆ ನಾನು ಅಡ್ಡಗಾಲು ಹಾಕಿಲ್ಲ. ಬದಲಾಗಿ, ರಾಜ್ಯದ ಮೂಲೆಮೂಲೆಗೂ ಓಡಾಡಿ ಕೆಲಸ ಮಾಡುವವರನ್ನು ನೇಮಿಸಿ ಎಂದಷ್ಟೇ ಹೇಳಿದ್ದೇನೆ. ಈ ವಿಚಾರದಲ್ಲಿ ನನ್ನ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಧ್ಯೆ ಯಾವುದೇ ಗೊಂದಲ ಇಲ್ಲ’ ಎಂದು ಉತ್ತರಿಸಿದರು.
ಪ್ರವಾಸ ರದ್ದಾದದ್ದನ್ನು ಬಂಡಾಯ ಎಂದು ಬಿಂಬಿಸಬೇಡಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸತೀಶ್ ಜಾರಕಿಹೊಳಿ ಅವರ ಮೈಸೂರು ಪ್ರವಾಸದ ಲಿಸ್ಟ್ನಲ್ಲಿ ನಾನೂ ಇದ್ದೆ. ನಾನೇ ನಮ್ಮ ಜಿಲ್ಲೆಯ ರಾಜು ಕಾಗೆ, ಮಹಾಂತೇಶ ಕೌಜಲಗಿ ಜೊತೆಗೆ ಮಾತನಾಡಿದ್ದೆ. ಎಲ್ಲರೂ ಸೇರಿ ಮೈಸೂರು ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೆವು. ಇದನ್ನು ಬಂಡಾಯ ಎಂದು ಬಿಂಬಿಸುವುದು ಸರಿಯಲ್ಲ. ಮೈಸೂರು ಪ್ರವಾಸ ರದ್ದಾಗಿದ್ದೇಕೆ ಎಂದು ನನಗೆ ಗೊತ್ತಿಲ್ಲ, ಸತೀಶ್ ಅವರನ್ನೇ ಕೇಳಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಗೆ ಬಂದಾಗ ಯಾರಾದರೂ ಶಾಸಕರು ಸ್ವಾಗತಕ್ಕೆ ಬರಬೇಕಿತ್ತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಮಾತನಾಡುತ್ತಾ ತಿಳಿಸಿದರು.