ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ(ಕೆಕೆ) ಭಾಗದ ಅಭ್ಯರ್ಥಿಗಳನ್ನು ಹೊರಗಿಟ್ಟು ನೇಮಕಾತಿ ಕೌನ್ಸೆಲಿಂಗ್ ನಡೆಸುತ್ತಿರುವದನ್ನು ತಡೆದು ಈ ಭಾಗದ ಅಭ್ಯರ್ಥಿಗಳನ್ನು ಪರಿಗಣಿಸಬೇಕೆಂದು ಒತ್ತಾಯಿಸಿ ಪದವೀಧರ ಶಿಕ್ಷಕ ಅಭ್ಯರ್ಥಿಗಳು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟಿಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
“ಪದವೀಧರ ಶಿಕ್ಷಕರ ನೇಮಕಾತಿಗೆ ಹೈಕೋರ್ಟ್ ಅನುಮತಿ ನೀಡಿದೆ. ಆದರೆ ಕೆಎಟಿ(ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ)ಯಲ್ಲಿ ಪ್ರಕರಣವೊಂದು ಬಾಕಿಯಿರುವ ನೆಪದಲ್ಲಿ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಶಾಲಾ ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭಿಸಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಭಾಗದಲ್ಲಿ 5 ಸಾವಿರಕ್ಕೂ ಅಧಿಕ ಶಿಕ್ಷಕ ಹುದ್ದೆಗಳು ಖಾಲಿಯಿವೆ. ಈ ಭಾಗದ ಅಭ್ಯರ್ಥಿಗಳನ್ನು ನೇಮಕ ಮಾಡುವುದರಿಂದ ಶೈಕ್ಷಣಿಕ ಅಭಿವೃದ್ದಿಗೆ ಸಹಕಾರಿಯಾಗಲಿದೆ” ಎಂದು ಹೇಳಿದರು.
“ಕೆಎಟಿಯಲ್ಲಿರುವ ಪ್ರಕರಣದ ಹೆಸರಿನಲ್ಲಿ ಈ ಭಾಗವನ್ನು ಬಿಟ್ಟು ಕೌನ್ಸೆಲಿಂಗ್ ನಡೆಸುವುದು ಅಭ್ಯರ್ಥಿಗಳಲ್ಲಿ ಅತಂತ್ರತೆಗೆ ಕಾರಣವಾಗಿದೆ. ಕೆಎಟಿಯಲ್ಲಿ ಬಾಕಿಯಿರುವ ಪ್ರಕರಣವನ್ನು ಇತ್ಯರ್ಥಪಡಿಸಿ ನೇಮಕಾತಿಗೆ ಪರಿಗಣಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಕೀಮೋಥೆರಪಿ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರ ಕೊರತೆ
ಸಚಿವರು ಮನವಿ ಸ್ವೀಕರಿಸಿದ್ದು, ಕೂಡಲೇ ಸರ್ಕಾರದ ಗಮನ ಸೆಳೆದು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ ಸೇರಿದಂತೆ ನೂರಾರು ಸಂಖ್ಯೆಯ ಶಿಕ್ಷಕ ಹುದ್ದೆಯ ಅಭ್ಯರ್ಥಿಗಳು ಭಾಗಿಯಾಗಿದ್ದರು.
ವರದಿ : ಹಫೀಜುಲ್ಲ