ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ತುರ್ತು ಐಸಿಸಿ ಸಭೆ ಕರೆಯಲು ತಿಳಿಸಿದ್ದು, ಕುಡಿಯುವ ನೀರಿಗಾಗಿ ನೀರು ಹರಿಸಲು ಮೇಲ್ಭಾಗದಿಂದ ಎಲ್ಲ ಗೇಜ್‌ಗಳ ನಿರ್ವಹಣೆ ಮಾಡಲು ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟಿಲ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ಪರಸ್ಥಿತಿ ಕುರಿತು ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಗ್ರಾಮೀಣ ಸೇರಿದಂತೆ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇರಳವಾಗಿದ್ದು, ಮುಖ್ಯಮಂತ್ರಿಗಳು ಕುಡಿಯುವ ನೀರಿಗೆ ಆದ್ಯತೆ ನೀಡಲು ತಿಳಿಸಿದ್ದಾರೆ. ಹಾಗಾಗಿ ತುರ್ತು ಐಸಿಸಿ ಸಭೆ ಕರೆಯಲು ಎಲ್ಲ ಶಾಸಕರ ಒತ್ತಾಯವಾಗಿದೆ. ಜಲಾಶಯದಿಂದ ಕುಡಿಯುವ ನೀರು ಹರಿಸಲು ಮೇಲ್ಬಾಗದಿಂದ ಕೊನೆಯವರೆಗೂ ಕಾಲುವೆಯಲ್ಲಿ ನೀರು ಹರಿಸಲು ಗೇಜ್ ನಿರ್ವಹಣೆ ಮಾಡಲು ಪ್ರತಿಯೊಂದು ಕ್ಷೇತ್ರದ ಶಾಸಕರೂ ಸಹಕಾರ ನೀಡಬೇಕು. ಕುಡಿಯುವುದಕ್ಕೆ ಮಾತ್ರ ನೀರು ಬಿಡಲಾಗುತ್ತಿದೆ. ಕುಡಿಯುವ ನೀರು ಅವಲಂಬಿತ ಕೆರೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ” ಎಂದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಮಾತನಾಡಿ, “ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರ ಬೇಕಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಂಡು ನಂತರ ಕಾರ್ಯರೂಪಕ್ಕೆ ಬರಬೇಕು” ಎಂದರು.
“ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿಲ್ಲ. ಸಾಕಷ್ಟು ರೈತರು, ಹತ್ತಿ, ಜೋಳ, ಭತ್ತ ಮತ್ತು ಮೆಣಸಿನಕಾಯಿ ಬೆಳೆದಿದ್ದಾರೆ. ನೀರಿನ ಅವಶ್ಯಕತೆ ಇದೆ. ಮೇಲ್ಬಾಗದಲ್ಲಿ ಅಕ್ರಮ ನೀರು ಬಳಕೆ ಹೆಚ್ಚಿದ್ದು, ಶಾಶ್ವತ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ರಮ ವಹಿಸಬೇಕು” ಎಂದು ತಿಳಿಸಿದರು.
ಶಾಸಕ ದದ್ದಲ್ ಬಸನಗೌಡ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಸಾಕಷ್ಟು ಗ್ರಾಮಗಳು ಬೋರ್‌ವೆಲ್ ಅವಲಂಬಿಸಿವೆ. ನೀರಿನ ಪ್ರಮಾಣ ಕುಸಿದಿದೆ. ಇದರಿಂದ ನೀರು ಕಡಿಮೆ ಸಿಗುತ್ತಿವೆ. ಅವಲಂಬಿತ ಕೆರೆಗಳ ಮೂಲಕ ನೀರು ಒದಗಿಸಬೇಕು’ ಎಂದರು.
‘ಎಲ್ಲ ಕೆರೆಗಳ ಭರ್ತಿಗೆ ಬಿ ಆರ್ ಜಲಾಶಯಕ್ಕೆ ನೀರು ತಂದು ತುಂಬಿಸಬೇಕು. ಅಲ್ಲಿ ನೀರಿದ್ದರೆ ಮಾತ್ರ ನಮಗೆ ನೀರು ದೊರೆಯಲು ಸಾಧ್ಯ. ಕಾಲುವೆಯಲ್ಲಿ ಸಾಕಷ್ಟು ಗೇಜ್‌ನಲ್ಲಿ ಗೇಟ್ ಮುರಿದು ಹೋಗಿದೆ. ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಾಲುವೆ ಮೇಲೆ ಹೋಗಿದ್ದು, ಅಲ್ಲಿ ಅಧಿಕಾರಿಗಳಿಲ್ಲ. ಬೇಜವ್ದಾರಿಯಿಂದ ಇದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ವಹಿಸಬೇಕು’ ಎಂದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, “ರಾಂಪುರ ಜಲಾಶಯದಲ್ಲಿ 10 ದಿನಗಳವರೆಗೆ ಆಗುವಷ್ಟು ನೀರು ಇದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಯಾಗುತ್ತೆ. ಬಿ ಆರ್ ಜಲಾಶಯ ತುಂಬಿಸುವುದು ಬಿಟ್ಟು ಬೇರೆ ದಾರಿಯಿಲ್ಲ. ರಾಂಪೂರ ಜಲಾಶಯಕ್ಕೆ ನೀರು ತುಂಬಿಸಬೇಕು. ಕ್ಷೇತ್ರವಾರು ಬರ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲು ಕ್ಷೇತ್ರಕ್ಕೆ ಐದು ಟ್ಯಾಂಕರ್ ನೀಡಬೇಕು” ಎಂದರು.
ಹಂಪನಗೌಡ ಬಾದರ್ಲಿ ಮಾತನಾಡಿ, “ಜಿಲ್ಲೆಯಲ್ಲಿ ಶಾಶ್ವತ ನೀರಿನ ಸಮಸ್ಯೆ ಪರಿಹಾರಕ್ಕೆ ಒಂದು ಪ್ರತೇಕ ನಿರ್ಣಯ ಕೈಗೊಳ್ಳಬೇಕು. ಕುಡಿಯುವ ನೀರು ಮತ್ತು ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು, ಇದೀಗ ಕುಡಿಯುವ ನೀರಿನ ಅಭಾವ ಹೆಚ್ಚಿದೆ. ಈಗಾಗಲೇ ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು, ಕುಡಿಯುವುದಕ್ಕೆ ನೀರು ಉಳಿಸಿಕೊಂಡಿಲ್ಲ. ಕೂಡಲೇ ಐಸಿಸಿ ತುರ್ತು ಸಭೆ ಕರೆಯಬೇಕು. ನಂತರ ಆಂಧ್ರಪ್ರದೇಶದ ಜೊತೆಗೆ ಮಾತನಾಡಿ, ಕುಡಿಯುವುದಕ್ಕೆ ನೀರು ಬಳಕೆ ಕುರಿತು ಮಾತನಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪದವೀಧರ ಶಿಕ್ಷಕರ ನೇಮಕಾತಿ; ಕೆಕೆ ಭಾಗದ ಅಭ್ಯರ್ಥಿಗಳ ಪರಿಗಣನೆಗೆ ಆಗ್ರಹ
“ಹಳ್ಳದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹ ಮಾಡಿ, ಜಾನುವಾರುಗಳಿಗೆ ಒದಗಿಸಲು ಕ್ರಮ ವಹಿಸಬೇಕು” ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಬಸನಗೌಡ ತುರ್ವಿಹಾಳ, ಮಾನಪ್ಪ ವಜ್ಜಲ್, ಕರೆಮ್ಮ ನಾಯಕ, ಹಂಪಯ್ಯ ನಾಯಕ ಸಾಹುಕಾರ್, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್‌ಪಿ ನಿಖಿಲ್, ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ವರದಿ : ಹಫೀಜುಲ್ಲ