- ʼತುಮಕೂರು ಜಿಲ್ಲೆಗೆ 30 ಸಾವಿರ ಮನೆಗಳನ್ನು ನೀಡಲು ನಿರ್ಧಾರʼ
- ಮನರೇಗಾ ಯೋಜನೆಯಡಿ 15 ಸಾವಿರ ಮಂದಿಗೆ ₹60 ಕೋಟಿ ಹಂಚಿಕೆ
ಟೀಕೆ ಮಾಡುವವರಿಗೆ ನಮ್ಮ ಕೆಲಸಗಳೇ ಉತ್ತರ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಅದರಲ್ಲಿ ಭಾಗ್ಯಲಕ್ಷ್ಮಿ ಕಾರ್ಯಕ್ರಮ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಟೀಕೆ ಮಾಡುತ್ತಿರುವವರೂ ಉಚಿತ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಜನಮನದಲ್ಲಿ ಮನ್ನಣೆಗಳಿಸಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮರೆಶ್ವರ್ ಪ್ರತಿಪಾದಿಸಿದರು.
ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ನಡೆದ ಗ್ರಾಮ ಪಂಚಾಯಿತಿಯ ಅರ್ಹ ಫಲಾನುಭವಿಗಳಿಗೆ ಪಿಎಂಎವೈ ಅಡಿಯಲ್ಲಿ ಮನೆ ಮಂಜೂರಾತಿ ಪತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ತಾಲೂಕಿನ ಹಲವು ಇಲಾಖೆಗಳ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರಟಗೆರೆ ತಾಲೂಕಿನಲ್ಲಿ ನಂದಿನಿ ಹಾಲು ಒಕ್ಕೂಟದಿಂದ ಸುಮಾರು 222 ಮಂದಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ತಲಾ ಒಂದು ಗ್ರಾಮ ಪಂಚಾಯಿತಿಯಲ್ಲಿ ಸ್ವಸಹಾಯ ಸಂಘಗಳಿಗೆ ₹1.50 ಲಕ್ಷದವರೆಗೆ 250 ಮಂದಿಗೆ ಹಣ ಹಾಗೂ ಮನರೇಗಾ ಯೋಜನೆಯಡಿಯಲ್ಲಿ 15 ಸಾವಿರ ಜನರಿಗೆ 60 ಕೋಟಿ ರೂ.ಗಳನ್ನು ಹಂಚಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 70 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದರು.
“ನಮ್ಮ ತಾಲೂಕಿನಲ್ಲಿ 397 ಗ್ರಾಮಗಳಲ್ಲಿ ಸುಮಾರು ₹200 ಕೋಟಿ ಖರ್ಚು ಮಾಡಿ ಮನೆ ಮನೆಗೆ ಕೊಳಾಯಿ ವ್ಯವಸ್ಥೆ ಮಾಡಲಾಗುತ್ತಿದೆ. ಕೊರಟಗೆರೆಯಲ್ಲಿಯೇ ಗೃಹಲಕ್ಷ್ಮೀ ಯೋಜನೆಯಲ್ಲಿ 4,930 ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗಿದೆ. 2.25 ಲಕ್ಷ ಮಂದಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ (ಉಚಿತ ಬಸ್ಸು) ಶಕ್ತಿ ಯೋಜನೆಯಲ್ಲಿ 64 ಕೋಟಿ ರೂ. ಖರ್ಚಾಗಿದ್ದು, ಉಚಿತ ಸೌಲಭ್ಯ ದೊರೆಯುತ್ತಿದೆ” ಎಂದರು.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರಿಗೆ ಅನೇಕ ಅನುಕೂಲ ಮಾಡಿದೆ. 10 ಕೆ ಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಜನರ ಆಶೀರ್ವಾದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಕೇಂದ್ರ ಸರ್ಕಾರಕ್ಕೆ ನಾವು ಹಣ ಕೊಡುತ್ತೇವೆ, ನೀವು ಅಕ್ಕಿ ನೀಡಿ ಎಂದರೆ ಮೊದಲು ಒಪ್ಪಿ ನಂತರ ಹಿಂದೆ ಸರಿದರು. ಹಾಗಾಗಿ 5 ಕೆ ಜಿ ಅಕ್ಕಿ ನೀಡಿ ಉಳಿದ 5 ಕೆ ಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿದ್ದೇವೆ. ಜಿಲ್ಲೆಯಲ್ಲಿ ಸುಮಾರು 5.80 ಲಕ್ಷ ಪಡಿತರ ಚೀಟಿಗಳಿಗೆ 95 ಕೋಟಿ ರೂ. ಹಣ ಹಾಕಿದ್ದೇವೆ. ನಾವು ನೀಡಿದ ಎಲ್ಲ ಗ್ಯಾರಂಟಿಗಳನ್ನೂ ಜಾರಿಗೊಳಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ” ಎಂದರು.
“36 ಸಾವಿರ ಕೋಟಿ ರೂ ಹಣವನ್ನು ಜನ ಸಮುದಾಯಕ್ಕೆ ನೀಡುತ್ತಿದ್ದೇವೆ. ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುವ ಭರದಲ್ಲಿ ಸರ್ಕಾರದ ಬೇರೆ ಯೋಜನೆಗಳಿಗೆ ದುಡ್ಡಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ಕಾರ್ಯಕ್ರಮಗಳು ಯಾವೂ ನಿಂತಿಲ್ಲ” ಎಂದು ಹೇಳಿದರು.
“ಈ ರಾಜ್ಯದಲ್ಲಿ ಸತತವಾಗಿ 3 ಬಾರಿ ಗೃಹಮಂತ್ರಿಯಾಗಲು ಮತದಾರರು ನೀಡಿದ ಸಹಕಾರವನ್ನು ಎಂದಿಗೂ ಮರೆಯಲಾಗದು. ಪೊಲೀಸರು ಜನಸ್ನೇಹಿಯಾಗಬೇಕೆಂದು ಅನೇಕ ಯೋಜನೆಗಳನ್ನು ನೀಡಿದ್ದೇವೆ. ನನ್ನ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇನೆ. ದಸರಾ ಹಬ್ಬದ ವೇಳೆ ಪೊಲೀಸ್ ಇಲಾಖೆಯವರು ಮಹಾರಾಜರ ಕಾಲದಂತೆ ಉತ್ತಮವಾಗಿ ಬ್ಯಾಂಡ್ ನುಡಿಸಿದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ; ಪ್ರತಿ ಕ್ಷೇತ್ರಕ್ಕೆ 5 ಟ್ಯಾಂಕರ್ ನೀರು ನೀಡಲು ಸೂಚನೆ
ಜಿ ಪಂ ಸಿಇಒ ಪ್ರಭು ಜಿ ಮಾತನಾಡಿ, “ಜಿಲ್ಲೆಯಲ್ಲಿ ಬಡವರಿಗಾಗಿ 30 ಸಾವಿರ ನಿವೇಶನಗಳನ್ನು ನೀಡುವ ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸವಲತ್ತು ನೀಡುವ ಯೋಜನೆ ಮಾಡಲಾಗಿದೆ. ಫಲಾನುಭವಿಗಳಿಗೆ ಅತ್ಯಂತ ಪಾರದರ್ಶಕವಾಗಿ ಮನೆ ಬಾಗಿಲುಗಳಿಗೆ ಯೋಜನೆಗನ್ನು ನೀಡುವ ಉದ್ದೇಶ ಇದಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಉಪನಿರ್ದೇಶಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂ ಎಸ್ ಶ್ರೀಧರ್, ಮಧುಗಿರಿ ಕೃಷಿ ಇಲಾಖೆ ಉಪನಿರ್ದೇಶಕಿ ದೀಪಾಶ್ರೀ, ತಹಶೀಲ್ದಾರ್ ರಂಜಿತ್, ಇ ಒ ದೊಡ್ಡಸಿದ್ದಯ್ಯ, ಸಿಡಿಪಿಒ ಅಂಬಿಕಾ, ಸಿಪಿಐ ಕೆ ಪಿ ಅನಿಲ್, ಪಿಎಸ್‌ಐ ಚೇತನ್ ಕುಮಾರ್, 24 ಗ್ರಾ.ಪಂ ಪಿಡಿಒಗಳು, ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.