ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಭಾರೀ ಗದ್ದಲ ಶುರುವಾಗಿದೆ. ಆರೋಪದ ಬೆನ್ನಲ್ಲೇ, ಮೊಯಿತ್ರಾ ಅವರನ್ನು ಟಿಎಂಸಿ ಕೈಬಿಟ್ಟಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ವ್ಯಂಗ್ಯವಾಡಿದ್ದಾರೆ.
“ಟಿಎಂಸಿ ತೃಣಮೂಲ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ನಾಯಕರನ್ನು ಬಂಧಿಸಿದಾಗಲೆಲ್ಲ ಮೌನ ವಹಿಸಿದ್ದಾರೆ” ಎಂದು ಮಾಳವೀಯ ಆರೋಪಿಸಿದ್ದಾರೆ.
“ಮಮತಾ ಬ್ಯಾನರ್ಜಿ ಅವರು ಮಹುವಾ ಮೊಯಿತ್ರಾ ಅವರನ್ನು ಕೈಬಿಟ್ಟಿರುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಅವರು ಅಭಿಷೇಕ್ ಬ್ಯಾನರ್ಜಿಯವರನ್ನು ಹೊರತುಪಡಿಸಿ ಬೇರೆ ಯಾರನ್ನೂ ರಕ್ಷಿಸುವುದಿಲ್ಲ. ಹಲವಾರು ಟಿಎಂಸಿ ನಾಯಕರು ಗಂಭೀರ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಆರೋಪಗಳಲ್ಲಿ ಜೈಲಿನಲ್ಲಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಮೌನವಾಗಿದ್ದಾರೆ” ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಕ್ಕಾಗಿ ಮೊಹಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊಯಿತ್ರಾ ಅವರ ವಿರುದ್ಧದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಟಿಎಂಸಿ ಶನಿವಾರ ನಿರಾಕರಿಸಿದೆ.
“ಈ ವಿಷಯದ ಬಗ್ಗೆ ಪಕ್ಷವು ಏನೂ ಹೇಳುವುದಿಲ್ಲ. ಈ ವಿವಾದವು ಯಾರ ಸುತ್ತ ಸುತ್ತುತ್ತಿದೆಯೋ ಅವರೇ ಇದಕ್ಕೆ ಪ್ರತಿಕ್ರಿಯಿಸಲು ಸೂಕ್ತ ಎಂದು ನಾವು ಭಾವಿಸುತ್ತೇವೆ” ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದ್ದಾರೆ.
ಪಕ್ಷವು ವಿವಾದದಲ್ಲಿ ಭಾಗಿಯಾಗಲು ಬಯಸುವುದಿಲ್ಲ. ಆದ್ದರಿಂದ ಅಂತರವನ್ನು ಕಾಯ್ದುಕೊಳ್ಳುತ್ತದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಮೊಯಿತ್ರಾ ಅವರು ಉದ್ಯಮಿಯಿಂದ ಲಂಚ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ತನಿಖೆಗೆ ಒತ್ತಾಯಿಸಿ ದುಬೆ ಅವರು ಲೋಕಪಾಲ್‌ಗೂ ಪತ್ರ ಬರೆದಿದ್ದಾರೆ.
ಉದ್ಯಮಿ ದರ್ಶನ್ ಹಿರಾನಂದಾನಿ ಅವರು ಮೊಯಿತ್ರಾ ಅವರಿಗೆ ಆಗಾಗ್ಗೆ ಬೇಡಿಕೆಗಳನ್ನು ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸೇರಿದಂತೆ ವಿವಿಧ ಅನುಕೂಲಗಳನ್ನು ಒದಗಿಸುತ್ತಿದ್ದರು. ಎಂದು ಆರೋಪಿಸಲಾಗಿದೆ.
ಮೊಯಿತ್ರಾ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಲೋಕಸಭೆಯ ತನಿಖಾ ಸಮಿತಿಯ ವಿಚಾರಣೆ ಹಾಜರಾಗಿ, ಪ್ರಶ್ನೆಗಳನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.