ಗ್ರಾಮ ಮಟ್ಟದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಮಾರಾಟ ಸಾಗಾಣಿಕೆ ನಿಯಂತ್ರಣ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯವಿವಾಹ ನಿಷೇಧಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್ ಎಮ್ ಹೇಳಿದರು.
ಬಸವಕಲ್ಯಾಣದ ಡಾ. ಬಿ.ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ತರಬೇತಿ ಮತ್ತು ಸಮಸ್ಯೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
“ಬಸವಕಲ್ಯಾಣ ತಾಲೂಕಿನ 9 ಗ್ರಾಮ ಪಂಚಾಯತಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಶಾಲೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಳ ಕಂಡುಬಂದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವರ್ತರಾಗಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಕೆಲಸ ತ್ವರಿತಗತಿಯಲ್ಲಿ ಮಾಡಬೇಕೆಂದು” ತಿಳಿಸಿದರು.
ಮಕ್ಕಳ ಕಾವಲು ಸಮಿತಿ ತರಬೇತಿ ಮತ್ತು ಸಮಸ್ಯೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಒಂಬತ್ತು ಗ್ರಾಮ ಪಂಚಾಯತ್ ಪಿಡಿಒಗಳು ಹಾಜರಾಗಬೇಕಿತ್ತು. ಆದರೆ ಮೂರು ಜನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಬಂದಿದ್ದಾರೆ. ಇಂದು ಆಗಮಿಸದ ಪಿಡಿಒಗಳಿಗೆ ಶೋಕಾಸ್ ನೋಟಿಸ್ ನೀಡಿ ಆಯೊಗಕ್ಕೆ ಮಾಹಿತಿ ನೀಡುವಂತೆ ತಾಲೂಕಾ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
“ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಬಾಲ್ಯ ವಿವಾಹ ಮುಕ್ತ ಕರ್ನಾಟಕ ಆಂದೋಲನ ಮಾಡುವ ಆದೇಶ ಹೊರಡಿಸಿದ್ದು, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಬಾಲ್ಯ ವಿವಾಹ ನಿಷೇಧಕ್ಕೆ ಮುಂದಾಗಬೇಕು” ಎಂದು ತಿಳಿಸಿದರು.
ಎಮ್. ವೆಂಟಟೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ರಾಜ್ಯಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಮಾಡಿರುವ ಉದ್ದೇಶವನ್ನು ಅರಿತುಕೊಂಡು ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ವಿವಿಧ ಇಲಾಖೆಗಳಿಂದ ಬಂದ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ” ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಜಾತಿ ನಿಂದನೆ | ಸರ್ಕಾರಿ ಶಾಲೆಯ ದಲಿತ ಪ್ರಾಂಶುಪಾಲ ಆತ್ಮಹತ್ಯೆ
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ ಸುಭಾಶ್ಚಂದ್ರ ಎಮ್. ನಿಡಗುಂದಿ, ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಬೇಡಕ್‌ಪಳ್ಳಿ , ಬಿಸಿಯೂಟ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್, ನಾಗಶೆಟ್ಟಿ ಭದ್ರಶೆಟ್ಟಿ , ಪ್ರಮೀಳಾ, ಮಲ್ಲೇಶಪ್ಪಾ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ, ಶಾಲಾ ಮುಖ್ಯ ಶಿಕ್ಷಕರು, ಅಂಗನವಾಡಿ ಮೇಲ್ವೀಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯಗಳ ಎಮ್.ಬಿ.ಕೆ, ಯುವಜನತೆ ಮತ್ತು ಮಕ್ಕಳು ಇತರರು ಉಪಸ್ಥಿತರಿದ್ದರು. ಯೋಜನಾ ಸಂಯೋಜಕ ಸಂಪತ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಜಿಲ್ಲಾ ಸಂಯೋಜಕಿ ಸರುಬಾಯಿ ದೊಡ್ಡಿ ಸ್ವಾಗತಿಸಿದರು, ಸಮುದಾಯ ಸಂಘಟಕ ಚಂದ್ರಕಾಂತ್ ವಂದಿಸಿದರು, ಸಂಸ್ಥೆಯ ಸಿಬ್ಬಂದಿಗಳಾದ ಅಶ್ವೀನಿ, ವೀರಭದ್ರಪ್ಪಾ, ಪ್ರಮೋದ್ ಮತ್ತು ಮಾಣಿಕೇಶ್ವರಿ ಇದ್ದರು.