ಸಚಿವ ಸತೀಶ್ ಜಾರಕಿಹೊಳಿ ತಮ್ಮ ಭದ್ರಕೋಟೆ ಎಂದುಕೊಂಡಿರುವ ಬೆಳಗಾವಿ ಅವರ ಕೈತಪ್ಪಿಹೋಗುತ್ತಿದೆ. ಈ ಬಾರಿ ಅವರ ಕುಟುಂಬಕ್ಕೆ ಲೋಕಸಭಾ ಟಿಕೆಟ್ ಸಿಗುವುದು ಅನುಮಾನ ಎಂದು ಮಾಜಿ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ವಾದ ಮತ್ತೆ ಮುನ್ನಲೆಗೆ ಬಂದಿದೆ. ಮೊದಲು ರಮೇಶ್ ಜಾರಕಿಹೊಳಿನಾ, ಹೆಬ್ಬಾಳ್ಕರ್ನಾ ಅನ್ನುವಂತಿತ್ತು. ಈಗ ನಾನಾ, ನೀನಾ (ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್) ಅಂತ ಆಗಿದೆ. ಅವರುಗಳ ಹಕ್ಕು ಚಲಾಯಿಸುವ ಹೋರಾಟ ಎಲ್ಲಿಗೆ ಹೋಗಿ ನಿಲ್ಲಲಿದೆ ನೋಡೋಣ. ನಾವು ಮೌನವಾಗಿದ್ದೇವೆ. 135 ಜನ ಗೆದ್ದಿದ್ದಾರೆ, ರಾಜ್ಯದ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಒಳ್ಳೆಯ ಆಡಳಿತ ಕೊಡಲಿ ಅಂತ ಬಯಸುತ್ತೇವೆ. ಅದನ್ನ ಬಿಟ್ಟು ಬೇರೇನು ಆಲೋಚನೆ ಇಲ್ಲ” ಎಂದರು.
ನಾನು ನೋಡುತ್ತಿರೋ ಹಾಗೆ, ಲಕ್ಷ್ಮೀ ಹೆಬಾಳ್ಕರ್ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನು ನಾನು ಹೇಳ್ತಿಲ್ಲ, ಜನರೇ ಹೇಳುತ್ತಿದ್ದಾರೆ. ಅವರೆಲ್ಲಾ 135 ಜನ ಒಂದೇ ಪಕ್ಷದಲ್ಲಿದ್ದಾರೆ, ಒಗ್ಗಟ್ಟಾಗಿದ್ದಾರೆ. ಮೈಸೂರಿಗೆ ಶಾಸಕರು ಒಟ್ಟಿಗೆ ಹೋಗಬೇಕು ಅಂದರೆ ಎಷ್ಟು ಒಗ್ಗಟ್ಟಿದೆ. ರಸ್ತೆಯಲ್ಲಿ ಹೋಗಬೇಕಾದರೆ ಏನೂ ಆಗಲ್ಲ. ಆದರೆ, ದೋಣಿಯಲ್ಲಿ ಹೋಗುತ್ತಿದ್ದಾರೆ. ನೋಡೋಣ ದೋಣಿಯನ್ನು ಯಾರು ತೂತು ಮಾಡುತ್ತಾರೋ ಎಂದು ಕಾಂಗ್ರೆಸ್ ಒಗ್ಗಟ್ಟಿನ ಕುರಿತು ಮುನಿರತ್ನ ವ್ಯಂಗ್ಯಮಾಡಿದರು.
ವಿದ್ಯುತ್ ಅಭಾವಕ್ಕೆ ಕಾರಣ ಕಾಂಗ್ರೆಸ್ ಎಂದಿರುವ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಯವರ ಮಾತು ನಿಜ. ನಮ್ಮ ಸರ್ಕಾರ ಇದ್ದಾಗ ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಇದ್ದರು. ಎಲ್ಲಾದರೂ ಒಂದು ದಿನ ವಿದ್ಯುತ್ ಖರೀದಿ ಬಗ್ಗೆ ಮಾತನಾಡಿದ್ದೇವಾ? ಈಗ ಏಕಾಏಕಿ ವಿದ್ಯುತ್ ಖರೀದಿ ಬಗ್ಗೆ ಮಾತನಾಡ್ತಿದ್ದಾರೆ. ಏನು ಅವಶ್ಯಕತೆ ಇತ್ತು? ಸೋಲಾರ್ ಪ್ಲಾಂಟ್ ಹಾಕಿದ್ದಾರೆ, ಎಲ್ಲಾ ಮಾಡಿದ್ದಾರೆ. ಆದರೂ, ವಿದ್ಯುತ್ ಖರೀದಿಗೆ ಹೊರಟಿದ್ದಾರೆ ಎಂದು ಎಚ್‌ಡಿಕೆಯವರನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಸಣ್ಣ ಅಭಿವೃದ್ಧಿ ಆಗಿಲ್ಲ. ಏನೂ ಇಲ್ಲ, ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ಕತ್ತಲಿಗೆ ತಳ್ಳುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ. ಇವರು ಎರಡು ಸಾವಿರ ಕೊಟ್ಟು, ವಾಪಸ್ ಕಿತ್ತುಕೊಳ್ತಿದ್ದಾರೆ. ಜನ ಅದನ್ನು ವಿರೋಧಿಸೋದನ್ನು ಕಾಯಬೇಕು. ಕೋಡೋದು ಎರಡು ಸಾವಿರ, ಕಿತ್ತುಕೊಳ್ಳೋದು ನಾಲ್ಕು ಸಾವಿರ. ಎರಡು ಸಾವಿರ ಒಂದು ಕುಟುಂಬ ಪಡೆಯುತ್ತಿದ್ರೆ, ನಾಲ್ಕು ಸಾವಿರ ಮತ್ತೊಂದು ಕುಟುಂಬ ಕಟ್ಟುವಂತಾಗಿದೆ. ಕರೆಂಟ್ ಬಿಲ್ ಎರಡು ಸಾವಿರ ಕಟ್ಟುತ್ತಿದ್ದಾರೆ. ಎಲ್ಲದರ ಬೆಲೆ ಹೆಚ್ಚಳವಾಗಿದೆ. ನಮ್ಮ ಕ್ಷೇತ್ರದ ಅನುದಾನ ಇವರು ಬಳಸಿಕೊಳ್ತಿದ್ದಾರೆ. ಇವರ ಬಳಿ ಹಣ ಇಲ್ಲ. ಹೇಗೆ ಆಡಳಿತ ಮಾಡ್ತಿದ್ದಾರೆ ಗೊತ್ತಾಗ್ತಿದೆ ಎಂದು ಟೀಕಿಸಿದರು.
ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಆಡಳಿತ ಮಾಡ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ತಾಜ್ ವೆಸ್ಟೆಂಡ್‌ನಲ್ಲಿ ಕುಳಿತಿದ್ರೋ, ಇಲ್ಲವೋ ಸೆಕೆಂಡರಿ. ನೀವು ಈಗ ವಿಧಾನಸೌಧದಲ್ಲಿ ಕುಳಿತಿದ್ದೀರಿ. ಒಳ್ಳೆಯ ಆಡಳಿತ ಕೊಡಿ. ನೋಡೋಣ ಹೇಗೆ ಕೊಡ್ತೀರಿ ಎಂದು ಸಿಎಂ ಸಿದ್ದರಾಮಯ್ಯಗೆ ಮುನಿರತ್ನ ಸವಾಲು ನೀಡಿದರು.