ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ಕಲ್ಯಾಣ ಕರ್ನಾಟಕ ಭಾಗದ ಮಹಾನ ಚೇತನ ಎಂದು ಚರಂತೇಶ್ವರ ಮಠದ ಬಸವ ಬೆಳವಿಯ ಶರಣಬಸವ ಸ್ವಾಮೀಜಿ ಹೇಳಿದರು.
ಭಾಲ್ಕಿ ಪಟ್ಡಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಭಾನುವಾರ ಆಯೋಜಿಸಿದ್ದ 293ನೆಯ ಮಾಸಿಕ ಶರಣ ಸಂಗಮ ಮತ್ತು ಲೇಖಕ ಮಹಾಂತೇಶ ಕುಂಬಾರ ವಿರಚಿತ ಸದ್ಗುರು ಚರಿತಾಮೃತ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಅಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಅದ್ಭುತ ಕೊಡುಗೆ ನೀಡಿ ಈ ಭಾಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಪಟ್ಟದ್ದೇವರು ತಮ್ಮ ಬಾಲ್ಯ ಜೀವನವನ್ನು ಕಷ್ಟದಲ್ಲಿ ಅನುಭವಿಸಿ ನಿಜಾಂನ ಆಳ್ವಿಕೆಯಲ್ಲಿ ದಿಟ್ಟತನ ಪ್ರದರ್ಶಿಸಿ ಗಡಿ ಭಾಗವನ್ನು ಕನ್ನಡ ನೆಲದಲ್ಲಿ ಉಳಿಸಿ ಕನ್ನಡವನ್ನು ಗಟ್ಟಿಯಾಗಿ ಕಟ್ಟಿದ್ದಾರೆ. ಅಪ್ಪಟ ಬಸವತತ್ವ ಅನುಯಾಯಿ ಆಗಿ ಜಾತೀಯತೆ, ಮೌಢ್ಯತೆಯನ್ನು ವಿರೋಧಿಸಿ ಬಸವಣ್ಣನವರ ಆಶಯದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು” ಎಂದು ನುಡಿದರು.
“ಮಹಿಳೆಯರ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲಾ-ಕಾಲೇಜು ತೆರೆದು ಬಸವಣ್ಣನವರ ಕನಸಿನ ಮಹಿಳಾ ಸಬಲೀಕರಣಕ್ಕೆ ಪಟ್ಟದ್ದೇವರು ಒತ್ತು ನೀಡಿದರು. ಪಟ್ಟದ್ದೇವರ ಆದರ್ಶಮಯ ಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ. ಅವರ ಬದುಕಿನ ಮೌಲ್ಯತೆ ಕುರಿತು ಅನೇಕ ಗ್ರಂಥಗಳು ಹೊರ ಬಂದಿವೆ. ಮಹಾಂತೇಶ ಕುಂಬಾರ ಅವರು ರಚಿಸಿದ ಸದ್ಗುರು ಚರಿತಾಮೃತ ಗ್ರಂಥದಲ್ಲಿ ಪಟ್ಟದ್ದೇವರ ಜೀವನ ಮತ್ತು ಸಾಧನೆ ಚಿತ್ರಣ ಅಡಗಿದೆ. ಪ್ರತಿಯೊಬ್ಬರೂ ಕೊಂಡು ಓದಬೇಕು” ಎಂದು ತಿಳಿಸಿದರು.
ಶಿಕ್ಷಕ, ಲೇಖಕ ಮಹಾಂತೇಶ ಕುಂಬಾರ ಅವರು ಗ್ರಂಥ ಕುರಿತು ಮಾತನಾಡಿ, “ಪಟ್ಟದ್ದೇವರ ಜೀವನ ಮತ್ತು ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅವರ ಕಾರ್ಯಗಳ ಬಗ್ಗೆ ಎಷ್ಟೇ ಬರೆದರೂ ಕೂಡ ಕಡಿಮೆ ಆಗುತ್ತದೆ. ಅಂತಹ ಪೂಜ್ಯರ ಬಗ್ಗೆ ಗ್ರಂಥ ಹೊರತರಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ” ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಶಕ್ತಿಯಿಂದ ಶ್ರೀಮಠವನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಪೂಜ್ಯರು ಸಂಪ್ರದಾಯವನ್ನು ಮೀರಿ ಬಸವಣ್ಣನವರು ಧರ್ಮಗುರು ಎಂದು ಸಾರಿದರು. ಬಸವತತ್ವ-ಶಿಕ್ಷಣ-ಸಮಾಜ ಸೇವೆಗೆ ಒತ್ತು ನೀಡಿದರು ಅದನ್ನು ಮುಂದುವರೆಸಿ ಕೊಂಡು ಹೋಗಲಾಗುತ್ತಿದೆ” ಎಂದು ತಿಳಿಸಿದರು.
ನೇತೃತ್ವ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, “ಪಟ್ಟದ್ದೇವರು ಈ ಭಾಗವನ್ನು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಸಮೃದ್ಧವಾಗಿ ಕಟ್ಟುವ ಪ್ರಯತ್ನ ಮಾಡಿದ್ದರು. ಬಸವತತ್ವ-ಕನ್ನಡ ಪಟ್ಟದ್ದೇವರ ಉಸಿರಾಗಿತ್ತು. ಅಂತಹ ಪೂಜ್ಯರ ನೆರಳಿನಲ್ಲಿ ಬೆಳೆಯುವ ಅವಕಾಶ ಸಿಕ್ಕಿರುವುದು ನನ್ನ
ಸೌಭಾಗ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶರಣರ ಕಲ್ಯಾಣ ಸಜ್ಜನರ ತವರು ಕ್ಷೇತ್ರವಾಗಲಿ : ಬಸವರಾಜ ಪಾಟೀಲ್ ಸೇಡಂ
ಕಾರ್ಯಕ್ರಮದಲ್ಲಿ ಶ್ವೇತಾ ಶರಣೆ ಸತ್ಯಕ್ಕ ಕುರಿತು ಅನುಭಾವ ನೀಡಿದರು. ಹಿರಿಯ ಪತ್ರಕರ್ತ ಸದಾನಂದ ಜೋಶಿ ಅಧ್ಯಕ್ಷತೆ ವಹಿಸಿದರು. ಸೇವಾ ಸಮಿತಿ ಅಧ್ಯಕ್ಷೆ ಸುವರ್ಣಾ ಬಲ್ಲೂರೆ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಗುರುನಾಥ ಗಡ್ಡೆ, ವೀರೇಶ ಕುಂಬಾರ ಸೇರಿದಂತೆ ಹಲವರು ಇದ್ದರು. ಪುಷ್ಪಾ ಶಿವರಾಜ ಗಂದಗೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.