ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂದು ಖ್ಯಾತಿ ಪಡೆದಿರುವ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂದು ಚನ್ನಗಿರಿ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿ ಕೆರೆಬಿಳಚಿ ಬಳಿ ಸೂಳೆಕೆರೆ ಇದೆ. ಈ ಕೆರೆಯಿಂದ ಚಿತ್ರದುರ್ಗ, ಚನ್ನಗಿರಿ, ಜಗಳೂರು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಲಾಗಿದ್ದು, ಆ ನೀರನ್ನು ಕುಡಿಯಲು ಬಳಸದಂತೆ ಕೃಷ್ಣ ಕಟ್ಟಿಮನಿ ಅವರು ಮನವಿ ಮಾಡಿದ್ದಾರೆ.
ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟಿದ್ದರು. ಹಲವರು ಅಸ್ವಸ್ಥರಾಗಿದ್ದರು. ಇದಕ್ಕೆ ಸೂಳೆಕೆರೆ ನೀರೇ ಕಾರಣವೆಂಬ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, ಕೆರೆಯ ನೀರನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಕೆರೆ ನೀರಲು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಇದರಿಂದಾಗಿ, ಮೂರು ತಿಂಗಳಿಂದ ಕುಡಿಯುವ ಉದ್ದೇಶಕ್ಕೆ ಕೆರೆಯ ನೀರನ್ನು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ, ಕುಡಿಯಲು ಹೊರತು ಪಡಿಸಿ ಗೃಹ ಬಳಕೆ ಇತರ ಉದ್ದೇಶಗಳಿಗೆ ನೀರನ್ನು ಪೂರೈಕೆ ಮಾಡಲು ಚನ್ನಗಿರಿ ಪುರಸಭೆ ಆರಂಭಿಸಿದೆ. ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು ಬಳಸದಂತೆ ಜನರಲ್ಲಿ ಮನವಿ ಮಾಡಿದೆ.