- ಕುಮಾರಸ್ವಾಮಿ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಯಾಕಿದ್ದರು?: ಸಿಎಂ
- ‘ನಮಗೂ ಕ್ರೀಡಾ ಪ್ರೇಮ ಇದೆ, ಕ್ರೀಡೆ ಬೆಂಬಲಿಸಲು ಹೋಗಿದ್ದೆವು’
ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಯಾಕಿದ್ದರು? ಸುಮ್ಮನೇ ಮಾತನಾಡುತ್ತಾರೆ. ನಮಗೂ ಕ್ರೀಡಾ ಪ್ರೇಮ ಇದೆ. ಕ್ರೀಡೆ ಬೆಂಬಲಿಸಲು ಹೋಗಿದ್ದೆವು. ಅವರ ತರ ಹೋಟೆಲ್‌ನಲ್ಲಿ ಅಧಿಕಾರ ನಡೆಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಟೌನ್ ಹಾಲ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ʼಪಾಕಿಸ್ತಾನ ಬೆಂಬಲಿಸಲು ಕಾಂಗ್ರೆಸ್ ನಾಯಕರು ಹೋಗಿದ್ದರುʼ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇದ್ದ ಕಾರಣವನ್ನು ಮೊದಲು ತಿಳಿಸಲಿ. ಕುಣಿಯಲಾರದವ ನೆಲ ಡೊಂಕು ಎಂದರಂತೆ, ಹಾಗಾಗಿದೆ ಕುಮಾರಸ್ವಾಮಿ ಪರಿಸ್ಥಿತಿ. ಇದ್ದ ಅಧಿಕಾರ ಉಳಿಸಿಕೊಳ್ಳಲಾಗದೇ ಈಗ ಏನೇನೋ ಸಂಕಟದಿಂದ ಮಾತನಾಡುತ್ತಿದ್ದಾರೆ. ತಮಗೆ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ, ಬೇರೆಯವರ ಮೇಲೆ ಆರೋಪವನ್ನು ಹೊರಿಸಿರುವುದು ನಿರರ್ಥಕ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳದ ಮೂರ್ಖರು
ಮುಖ್ಯಮಂತ್ರಿಗಳು ವಸತಿಗೃಹವನ್ನು ಹಿಂದಿರುಗಿಸಿಲ್ಲ ಎಂಬ ಅವರ ಟೀಕೆಗೆ ಉತ್ತರಿಸುತ್ತಾ, ” ಯಡಿಯೂರಪ್ಪನವರೂ ಕಾವೇರಿಯಲ್ಲಿ ಕಡೆಯತನಕ ವಾಸವಿದ್ದರು. ಜಾರ್ಜ್ ಅವರಿಗೆ ಹಂಚಿಕೆಯಾಗಿದ್ದ ವಸತಿಗೃಹದಲ್ಲಿ ನಾನು ವಾಸವಿದ್ದೆ. ನಾನು ವಾಸವಿದ್ದ ವಸತಿಗೃಹ ಮೀಸಲಾದ ವಸತಿಗೃಹವಲ್ಲ. ಅದರಲ್ಲಿ ಯಾರು ಬೇಕಾದರೂ ವಾಸವಿರಬಹುದು” ಎಂದರು.
“ನಾಳೆ ನಡೆಯಲಿರುವ ಚಾಮುಂಡೇಶ್ವರಿ ದೇವಿ ಮೆರವಣಿಗೆ, ನಂದಿಕಂಬದ ಪೂಜೆ, ಪಂಜಿನ ಮೆರವಣಿಗೆ ಸೇರಿದಂತೆ ದಸರಾ ಮಹೋತ್ಸವದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸಲಿದ್ದೇನೆ ಎಂದರು.
ಕಿತ್ತೂರು ಉತ್ಸವಕ್ಕೆ ಅನುದಾನದ ಕೊರತೆ ಇದೆ ಎಂದು ಶಾಸಕರು ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, “ಇದೆಲ್ಲ ಮಾಧ್ಯಮದ ಸೃಷ್ಟಿ. ಅನುದಾನ ಇದೆ. ಯಾವ ಶಾಸಕರೂ ಅನುದಾನ ಕೊರತೆ ಬಗ್ಗೆ ಮಾತನಾಡಿಲ್ಲ. ಸುಮ್ಮನೇ ಏನೇನೋ ಸುದ್ದಿ ಮಾಡಬೇಡಿ” ಎಂದರು.