ಈ ದಿನ ಸಂಪಾದಕೀಯ | ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳದ ಮೂರ್ಖರು

Date:

Advertisements
ಶಕ್ತಿ ಯೋಜನೆ ನಾಡಿನ ಮಹಿಳೆಯರಲ್ಲಿ ಉಂಟುಮಾಡಿರುವ ಸಂಚಲನ, ಸ್ವಾವಲಂಬನೆಯನ್ನು,ಧೈರ್ಯಸ್ಥೆಯರ ದಾಪುಗಾಲನ್ನು, ದೇಶದ ಆರ್ಥಿಕ ಚಲನಶೀಲತೆಯನ್ನು- ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗದಿದ್ದರೆ ಇವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ. ಅಥವಾ ಸರ್ಕಾರ ನಡೆಸಲು ಇವರು ಯೋಗ್ಯರಲ್ಲ

ರಾಜ್ಯದ ಮಹಿಳೆಯರು ಜೂನ್‌ನಿಂದ ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ, ದೂರದ ಧಾರವಾಡದಲ್ಲೊಂದು ಘಟನೆ ಜರುಗಿತು. ಧಾರವಾಡದಿಂದ ಸವದತ್ತಿಗೆ ಹೋಗಲು ಬಂದಿದ್ದ ಬಡ ಮುದುಕಿ ನಿಂಗವ್ವರ ಕೈಗೆ ಹೂ ಮತ್ತು ಟಿಕೆಟ್‌ ಕೊಟ್ಟ ಕಂಡಕ್ಟರ್, ‘ಇಂದಿನಿಂದ ಮಹಿಳೆಯರಿಗೆ ಉಚಿತ ಪ್ರಯಾಣ’ ಎಂದಾಗ ಆ ಮುದುಕಿ ನಿಂಗವ್ವ, ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿದ್ದರು.

ಹಾಗೆಯೇ ಮತ್ತೊಂದು ಘಟನೆ, ʼಮಗಳಿಗೆ ಆರಾಮ ಇದ್ದಿಲ್ಲರೀ, ಗದಗದ ದವಾಖಾನೆಗೆ ಕರಕೊಂಡ ಹೋಗದ್ದನ್ರಿ, ಹೋಗಾಕ ರೊಕ್ಕ ಕಡಿಮೆ ಇತ್ತರಿ, ಅದರಲ್ಲೆ ಔಷಧಿ-ಮಾತ್ರೆ ತಗೊಂಡವ್ರಿ, ಬಸ್‌ಗೆ ಹೋಗಾಕ ಟಿಕೆಟ್‌ ಫ್ರೀ ಐತರಿ, ಫ್ರೀ ಮಾಡಿದ್ದು ಭಾಳಾ ಚಲೋ ಆಗೇತ್ರಿ. ಕಷ್ಟದಾಗ ದೇವರು ಕೈ ಹಿಡಿತಾನ ಅಂದ್ರೆ ಇದೇ ನೋಡ್ರಿʼ ಎಂದು ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ಹುಲಿಗೆಮ್ಮ ಮಾದರ ಹೇಳಿದ್ದರು.

ಇವೆರಡು ಘಟನೆಗಳು ಹಳ್ಳಿಯ ಮುಗ್ಧ ವೃದ್ಧ ಮಹಿಳೆಯರಿಂದ ಆ ಕ್ಷಣಕ್ಕೆ ವ್ಯಕ್ತವಾದ ಸಹಜ ಸಮಾಧಾನದ ಸಂತೃಪ್ತ ಸ್ಪಂದನಗಳು, ಋಣಸಂದಾಯದ ಸಣ್ಣ ಉದಾಹರಣೆಗಳು.

Advertisements

ಅಕಸ್ಮಾತ್‌, ಈ ಶಕ್ತಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದರೆ, ಈ ಇಬ್ಬರು ವೃದ್ಧ ಮಹಿಳೆಯರ ಮಾತುಗಳನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿ ಇಡುತ್ತಿದ್ದರು. ಅವರನ್ನು ದೆಹಲಿಗೆ ಕರೆಸಿಕೊಂಡು ಸನ್ಮಾನ ಮಾಡುತ್ತಿದ್ದರು. ದೇಶದಾದ್ಯಂತ ಅವರ ಮೆರವಣಿಗೆ ಮಾಡಿ ಮೆರೆಸುತ್ತಿದ್ದರು. ಮೋದಿ ಎಂದರೆ ಮಹಿಳೆ ಎಂದು ಸಾರುತ್ತಿದ್ದರು. ಮುಂದುವರೆದು ನೆಹರೂ-ಇಂದಿರಾ ಗಾಂಧಿಗಳೇನು ಮಾಡಿದ್ದರು, ಮೋದಿ ಮಾಡಿದ್ದು ಎಲ್ಲ ಎಂದು ಇತಿಹಾಸವನ್ನೇ ತಿದ್ದಿ ಬರೆದುಕೊಳ್ಳುತ್ತಿದ್ದರು. ಇನ್ನು ʼಗೋಧಿʼ ಬಿಸ್ಕತ್‌ ತಿಂದ ಪತ್ರಕರ್ತರು ವೃದ್ಧ ಮಹಿಳೆಯರ ಸಹಜ ಸಂತಸಕ್ಕೆ ಹೊಸ ವ್ಯಾಖ್ಯಾನ ಬರೆಯುತ್ತಿದ್ದರು, ಮೋದಿಗೆ ಪದಪುಂಜಗಳನ್ನು ಪೋಣಿಸಿ ಪ್ರಚಾರ ಕೊಟ್ಟು ಅಟ್ಟಕ್ಕೇರಿಸುತ್ತಿದ್ದರು. ದೇಶದ ಮಹಿಳೆಯ ಮತಗಳು ಮೋದಿ ಮಡಿಲಿನಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು.

ಆದರೆ ಕಾಂಗ್ರೆಸ್‌ ಸರ್ಕಾರ, ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳಲಾಗದ ಮುಖೇಡಿಯಂತೆ ವರ್ತಿಸುತ್ತಿದೆ. ಇದು ನಮ್ಮ ನಾಯಕಿ ಇಂದಿರಾ ಗಾಂಧಿಯವರು ಗರೀಬಿ ಹಠಾವೋ ಯೋಜನೆಯ ಮುಂದುವರೆದ ಭಾಗ ಎಂದು ತಣ್ಣಗಿದೆ. ಜನಪರ ಸರ್ಕಾರವೊಂದು ಮಾಡಬೇಕಾದ ಕೆಲಸವೆಂದು ಸುಮ್ಮನಿರಬಹುದು, ಆದರೆ ಆ ಯೋಜನೆ ನಾಡಿನ ಮಹಿಳೆಯರಲ್ಲಿ ಉಂಟುಮಾಡಿರುವ ಸಂಚಲನ, ಸ್ವಾವಲಂಬನೆಯನ್ನು ಕಂಡೂ ಕಾಣದಂತಿರಲಾದೀತೇ? ಮಹಿಳೆಯ ಕೈಗೆ ಬಂದ ಹಣದಿಂದ ಧೈರ್ಯಸ್ಥೆಯ ದಾಪುಗಾಲನ್ನು, ದೇಶದ ಆರ್ಥಿಕ ಚಲನಶೀಲತೆಯನ್ನು- ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗದಿದ್ದರೆ; ಅದನ್ನು ಪಕ್ಷದ ಪರವಾದ ಅಲೆಯನ್ನಾಗಿ ಪರಿವರ್ತಿಸಿಕೊಳ್ಳಲಾಗದಿದ್ದರೆ; ಅದು ನಮ್ಮ ಪಕ್ಷದ ಸಾಧನೆ ಎಂದು ಎದೆ ತಟ್ಟಿ ಹೇಳಿಕೊಳ್ಳಲಾಗದಿದ್ದರೆ; ಇವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ. ಅಥವಾ ಸರ್ಕಾರ ನಡೆಸಲು ಯೋಗ್ಯರಲ್ಲ.

ಇಲ್ಲಿ ಕೊಂಚ ಮೈಚಳಿ ಬಿಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ. ʼಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡ 15 ರಷ್ಟು ಹೆಚ್ಚಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಅನುವಾಗುವಂತೆ, ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್‌ಗಳ ಖರೀದಿಗೆ 500 ಕೋಟಿ ರೂಪಾಯಿ ಒದಗಿಸಲಾಗಿದೆʼ ಎಂದಿದ್ದಾರೆ. ತಮ್ಮ ಸಾಧನೆಯನ್ನು ತಾವೇ ಸಾರಿಕೊಳ್ಳುವುದು ಸರಿಯಲ್ಲವೆಂದು ಅಷ್ಟಕ್ಕೇ ಸುಮ್ಮನಾಗಿದ್ದಾರೆ.

ಆದರೆ, ಮಾತನಾಡಬೇಕಾದ ಮಾಧ್ಯಮಗಳು ಮಾತನಾಡುತ್ತಿಲ್ಲ. ತಮ್ಮ ಖಾತೆಯ ಗೆಲುವನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯಬೇಕಾದ ಹುಮ್ಮಸ್ಸು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಲ್ಲಿ ಕಾಣುತ್ತಿಲ್ಲ. ಮಾಧ್ಯಮಗಳಿಗೆ ಒಂದು ಪುಟದ ಜಾಹೀರಾತು ನೀಡಿದರೆ, ಅದಷ್ಟೇ ಸಾಧನೆಯಲ್ಲ. ಇನ್ನು ಕಾಂಗ್ರೆಸ್‌ ಪಕ್ಷದವರಿಗೆ ಇದು ತಮ್ಮ ಪಕ್ಷದ ಸಾಧನೆ ಎಂದು ಅನ್ನಿಸುತ್ತಲೇ ಇಲ್ಲ. ಅದನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವ ಮುತ್ಸದ್ದಿಗಳೂ ಕಾಣುತ್ತಿಲ್ಲ.

ಬದಲಿಗೆ ಪಕ್ಷ ಅಧಿಕಾರಕ್ಕೆ ಬಂದಿದೆ, ಏನಾದರೂ ಮಾಡಿ, ಹೇಗಾದರೂ ಮಾಡಿ ಅಧಿಕಾರಕ್ಕೇರಬೇಕು. ಆದಷ್ಟು ಬೇಗ ವರ್ಗಾವಣೆಯೋ ಮತ್ತೊಂದೋ ಮಾಡಿ ಬಾಚಿ ಬಳಿಯಬೇಕು, ಅದನ್ನೇ ಚೆಲ್ಲಿ ಚುನಾವಣೆ ಗೆಲ್ಲಬೇಕು, ಹೈಕಮಾಂಡನ್ನು ಹೈಕ್ಲಾಸಾಗಿ ನೋಡಿಕೊಳ್ಳಬೇಕು ಎಂಬುದಷ್ಟೇ ಕಾಣುತ್ತಿದೆ.

ಇದರ ಜೊತೆಗೆ ಕಾಂಗ್ರೆಸ್ಸಿಗರ ಗುಂಪುಗಾರಿಕೆ, ಜಾತಿಜಗಳ, ಬಂಡಾಯ, ಅಸಮಾಧಾನ, ಕಾಲೆಳೆಯುವಿಕೆ ತಾರಕಕ್ಕೇರುತ್ತಿದೆ. ಮಂತ್ರಿಗಳು ಇಪ್ಪತ್ತು ವರ್ಷದ ಹಿಂದಿನ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಂತೆ ಕಾಣುತ್ತಿದ್ದಾರೆ. ಕೆಲವರು ಕುರ್ಚಿಯಲ್ಲಿ ಕೂತು ತೂಕಡಿಸುತ್ತಿದ್ದಾರೆ. ನಾಲ್ಕೈದು ಮಂತ್ರಿಗಳಷ್ಟೇ ಹೊಣೆಯರಿತು ಬದಲಾವಣೆ ತರಲು ಯತ್ನಿಸುತ್ತಿದ್ದಾರೆ.

ಗ್ಯಾರಂಟಿಗಳಾಚೆ ಉಳಿಯುವ ಹಣದಲ್ಲಿ ಮಾಡಬಹುದಾದ ಇತರ ಅಭಿವೃದ್ಧಿ ಕ್ರಮಗಳ ಮೇಲೆ ಎಲ್ಲರ ಗಮನವಿಲ್ಲ. ಹಣದ ಅಗತ್ಯವಿಲ್ಲದ ನೂರಾರು ಕ್ರಮಗಳನ್ನು, ಇರುವ ಹಣವನ್ನೇ ಸದ್ವಿನಿಯೋಗ ಮಾಡುವ ನೂರಾರು ದಾರಿಗಳನ್ನು ಹುಡುಕಬೇಕಾದ್ದು ಇಡೀ ಸಂಪುಟದ ಕರ್ತವ್ಯವೆಂದು ಭಾವಿಸುತ್ತಿಲ್ಲ. ಅದಕ್ಕೆ ಬೇಕಾದ ನಾಯಕತ್ವ ಕೊಡುವ ಅನುಭವವುಳ್ಳ ಸಿಎಂ ಮೈಕೊಡವಿ ಏಳುತ್ತಿಲ್ಲ.

ಬೆಂಕಿ ಹಚ್ಚುವ ಬಿಜೆಪಿ ಬೇಡವೆಂದು ಕಾಂಗ್ರೆಸ್ ಆರಿಸಿ ಕಳಿಸಿದ ನಾಡಿನ ಜನತೆ, ಕೇವಲ ಆರು ತಿಂಗಳು ಕಳೆಯುವುದರೊಳಗೆ ಹತಾಶೆ, ಬೇಸರ, ಜಿಗುಪ್ಸೆಗೆ ಜಾರುವಂತಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತದಿಂದ ದೊಡ್ಡದೇನನ್ನೂ ನಿರೀಕ್ಷೆ ಮಾಡದಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇದು ಹೀಗೆಯೇ ಮುಂದುವರೆದರೆ, ಬಡವರ ಸಿಟ್ಟಿಗೆ ಕಾಂಗ್ರೆಸ್ ಸುಟ್ಟು ಕರಕಲಾಗುವುದು ಖಂಡಿತ, ಎನ್ನಲಾಗುತ್ತಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X