ರಾಜ್ಯಾದ್ಯಂತ ದಿನೇ ದಿನೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಳೆದ 20 ದಿನದಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿತ್ತು. ಇದೀಗ, ನಗರದಲ್ಲಿ ಪ್ರಕರಣಗಳ ವರದಿ ಕಡಿಮೆಯಾಗುತ್ತಿವೆ. ಆದರೆ, ರಾಜ್ಯದ ಇತರೆ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ ಕಂಡುಬಂದಿದೆ.
ಈ ವರ್ಷದ ಅ.1 ರವರೆಗೆ ಬೆಂಗಳೂರಿನಲ್ಲಿ 5,767 ಪ್ರಕರಣಗಳು ವರದಿಯಾಗಿದ್ದವು. ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿಯೂ 4,505 ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರಿನಲ್ಲಿ 372 ಪ್ರಕರಣ ಹೆಚ್ಚಾಗಿದ್ದು, ಇದೀಗ ಒಟ್ಟು 6,139 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ.
ರಾಜ್ಯದ ನಾನಾ ಭಾಗಗಳಲ್ಲಿ 4,505 ರಷ್ಟಿದ್ದ ಪ್ರಕರಣಗಳು 20 ದಿನಗಳಲ್ಲಿ 1,066 ಏರಿಕೆ ಕಂಡಿದೆ. ಒಟ್ಟು 5,571 ಪ್ರಕರಣಗಳು ವರದಿಯಾಗಿವೆ.
ವೈದ್ಯರು ಆರೋಗ್ಯ ಇಲಾಖೆಗೆ ಮಾಡಿರುವ ವರದಿಯ ಮೇಲೆ ಈ ಡೆಂಗ್ಯೂ ಪ್ರಕರಣಗಳ ಅಂಕಿ ಅಂಶಗಳು ದಾಖಲಾಗಿವೆ. ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕವಾಗಬಲ್ಲ ಜ್ವರದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮರ್ಯಾದೆಗೇಡು ಹತ್ಯೆ | ಪ್ರೀತಿಸಿದಕ್ಕೆ ಮಗಳನ್ನೇ ಕೊಂದ ತಂದೆ
ಡೆಂಗ್ಯೂ ಜ್ವರ ಉಂಟಾದ ತಕ್ಷಣದಲ್ಲಿ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗ ಲಕ್ಷಣಗಳು ದಿನ ಕಳೆದಂತೆ ಅಂದರೆ ನಾಲ್ಕರಿಂದ ಏಳು ದಿನಗಳ ನಂತರ ಕಾಣಿಸಿಕೊಳ್ಳಲು ಮತ್ತು ಉಲ್ಬಣಗೊಳ್ಳಲು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಹೊಂದಿದ ಒಬ್ಬ ಮನುಷ್ಯನ ದೇಹದ ತಾಪಮಾನ 104F ಇದ್ದು, ಆತ ಈ ಕೆಳಗಿನ ರೋಗ ಲಕ್ಷಣಗಳನ್ನು ಹೊಂದಿರುತ್ತಾನೆ.
• ತಲೆನೋವು
• ಮೈಕೈ ನೋವು
• ಕೀಲುನೋವು
• ವಾಕರಿಕೆ
• ವಾಂತಿ
• ಕಣ್ಣುಗಳ ಹಿಂಭಾಗದಲ್ಲಿ ನೋವು
• ಊದಿಕೊಂಡ ಗ್ರಂಥಿಗಳ
• ದೇಹದ ಮೇಲೆ ಅಲ್ಲಲ್ಲಿ ಕಲೆಗಳು
ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?
• ಡೆಂಗ್ಯೂ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು
• ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ
• ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ
• ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ
• ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ
• ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ
• ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ
• ತೊಟ್ಟಿ, ಬಿಂದಿಗೆ, ಡ್ರಮ್ ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ
• ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ
• ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ
• ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು