ಹುಲಿ ಉಗುರು ಇರುವ ಲಾಕೆಟ್ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇದೀಗ, ಸಂತೋಷ್ ಅವರಿಗೆ ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ ಎದುರಾಗಿದೆ.
ಸದ್ಯ ಅರಣ್ಯಾಧಿಕಾರಿಗಳು ಸಂತೋಷ್ ಅವರಿಗೆ ದೊರೆತ ಹುಲಿ ಉಗುರಿನ ಮೂಲ ಕೆದಕಲು ತಯಾರಿ ನಡೆಸಿದ್ದಾರೆ. ಇದೀಗ ಹುಲಿ ಉಗುರಿಗೆ ಲಾಕೆಟ್ ಮಾಡಿ ಕೊಟ್ಟ ವರ್ತೂರು ಮೂಲದ ಚಿನ್ನದ ಅಂಗಡಿ ಮಾಲೀಕ ಹಾಗೂ ಸಂತೋಷ್ ಆಪ್ತ ರಂಜಿತ್ ಅವರಿಗೂ ಅರಣ್ಯಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಂಜಿತ್ ಅವರು ತನಿಖೆಗೆ ಹಾಜರಾದ ದಿನ ಆರೋಪಗಳು ಸಾಬೀತಾದರೆ, ಬಂಧನವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಸದ್ಯ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ಅವರು ಧರಿಸಿದ್ದ ಹುಲಿ ಉಗುರಿನ ಮೂಲವನ್ನು ಕೆದಕಲು ಮುಂದಾಗಿದ್ದಾರೆ. ಈ ಹುಲಿ ಉಗುರು ವರ್ತೂರು ಅವರಿಗೆ ಹೇಗೆ ದೊರೆಯಿತು? ಇವರಿಗೆ ಈ ಉಗುರನ್ನು ಕೊಟ್ಟಿದ್ಯಾರು? ಹುಲಿಯನ್ನು ಕೊಂದು ಅಥವಾ ಹುಲಿಯನ್ನು ಬೇಟೆಯಾಡಿ ಈ ಉಗುರು ತಂದಿದ್ದಾರಾ? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆಗುಂಡಿ ಮುಚ್ಚಲು ಪ್ರತಿ ವಾರ್ಡ್‌ಗೆ ₹15 ಲಕ್ಷ ಬಿಡುಗಡೆ ಮಾಡಿದ ಬಿಬಿಎಂಪಿ
“ಸುಮಾರು 3-4 ವರ್ಷಗಳ ಹಿಂದೆ ವರ್ತೂರು ಸಂತೋಷ್ ಅವರು ತಮಿಳುನಾಡಿಗೆ ಹೋಗಿದ್ದಾಗ ಹೊಸೂರು-ಧರ್ಮಪುರಿ ನಡುವೆ ಯಾವುದೋ ಒಂದು ಭಾಗದಲ್ಲಿ ಹುಲಿ ಉಗುರನ್ನು ತೆಗೆದುಕೊಂಡಿದ್ದಾರೆ. ಅಸಲಿಗೆ ಹುಲಿ ಉಗುರಿನ ಪೆಂಡೆಂಟ್ ಬಳಸುವುದು, ಧರಿಸುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅಪರಾಧ ಎಂಬುವುದು ಸಂತೋಷ್ ಅವರಿಗೆ ಗೊತ್ತಿರಲಿಲ್ಲ. ಸಂತೋಷ್ ಅವರಿಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ” ಎಂದು ಸಂತೋಷ್ ಪರ ವಕೀಲ ನಟರಾಜ್ ಹೇಳಿದರು.