ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಮಾಲ್ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಗ್ರಾಹಕರು ವಸ್ತುಗಳನ್ನು ಖರೀದಿ ಮಾಡಿದ ನಂತರ ಬ್ಯಾಗ್‌ಗಳಿಗೂ ಹಣ ನೀಡಿ ಖರೀದಿ ಮಾಡಬೇಕಾದ ಸ್ಥಿತಿಯಿದೆ. ಇದೀಗ, ಗೃಹಪಯೋಗಿ ವಸ್ತುಗಳು ಇರುವ ನಗರದ ಬೃಹತ್ ಐಕಿಯಾ ಮಾಲ್‌ನಲ್ಲಿ ನಡೆದ ಘಟನೆ ನ್ಯಾಯಾಲಯದ ಮೆಟ್ಟಿಲೇರಿದೆ.
ಐಕಿಯಾ ಮಾಲ್‌ನಲ್ಲಿ ವಸ್ತುಗಳನ್ನು ಖರೀದಿ ಮಾಡಿ ನಂತರ ಕಂಪನಿಯ ಲಾಂಛನವಿರುವ ಕ್ಯಾರಿ ಬ್ಯಾಗ್‌ಗಾಗಿ ಗ್ರಾಹಕರೊಬ್ಬರು ₹20 ಪಾವತಿಸಿದ್ದಾರೆ. ಇದಕ್ಕೆ ಬೇಸರಗೊಂಡ ಮಹಿಳೆಯೊಬ್ಬರು ಐಕಿಯಾ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದೀಗ ನ್ಯಾಯಾಲಯ ಮಹಿಳೆಗೆ ಐಕಿಯಾ ನೀಡಿದ ಕಿರುಕುಳಕ್ಕಾಗಿ ಪರಿಹಾರವಾಗಿ ₹3,000 ನೀಡುವಂತೆ ಆದೇಶಿಸಿದೆ.
ಜೋಗುಪಾಳ್ಯ ನಿವಾಸಿ ಸಂಗೀತಾ ಬೋಹ್ರಾ ಅವರು ನಾಗಸಂದ್ರದಲ್ಲಿರುವ ಐಕಿಯಾ ಸ್ಟೋರ್‌ಗೆ ಅಕ್ಟೋಬರ್ 6, 2022 ರಂದು ಭೇಟಿ ನೀಡಿದ್ದರು. ₹2,428 ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಬಿಲ್ ಮಾಡಿದ ನಂತರ, ಐಕಿಯಾ ಬ್ರ್ಯಾಂಡಿಂಗ್ ಹೊಂದಿರುವ ಕ್ಯಾರಿ ಬ್ಯಾಗ್‌ಗೆ ಸಿಬ್ಬಂದಿ ₹20 ರೂಪಾಯಿ ಶುಲ್ಕ ವಿಧಿಸಿದ್ದಾರೆ.
“ಖರೀದಿ ಮಾಡಿದರೂ ಕೂಡ ಬ್ರಾಂಡೆಡ್ ಬ್ಯಾಗ್‌ಗೆ ಏಕೆ ಹಣ ನೀಡಬೇಕು ಎಂದು ಬೋಹ್ರಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಗ್ರಾಹಕರು ಖರೀದಿ ಮಾಡಿದ ನಂತರ ಅವರಿಗೆ ಚೀಲಗಳನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಿಬ್ಬಂದಿಯಿಂದ ಉತ್ತರ ಸಿಗದಿದ್ದಾಗ, ₹20 ಕೊಟ್ಟು ಬ್ಯಾಗ್ ಖರೀದಿಸದೆ ಬೇರೆ ದಾರಿ ಇರಲಿಲ್ಲ” ಎಂದು ಸಂಗೀತಾ ಹೇಳಿದ್ದಾರೆ.
“ಬ್ರ್ಯಾಂಡ್ ಮುದ್ರಿತ ಲೋಗೋ ಹೊಂದಿರುವ ಬ್ಯಾಗ್‌ಗಳನ್ನು ಖರೀದಿಸಲು ಗ್ರಾಹಕರನ್ನು ಒತ್ತಾಯಿಸುವುದು, ಅನ್ಯಾಯದ ವ್ಯಾಪಾರದ ಅಭ್ಯಾಸವಾಗಿದೆ” ಎಂದು ಅವರು ತಿಳಿಸಿದ್ದಾರೆ.
ಐಕಿಯಾ ಕಂಪನಿ ಗ್ರಾಹಕರಿಂದ ಬ್ಯಾಗ್‌ಗೆ ಪ್ರತ್ಯೇಕವಾಗಿ ₹20 ಪಡೆಯುತ್ತಿರುವುದರಿಂದ ವ್ಯಾಪಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಗೀತಾ ಅವರು ಅಕ್ಟೋಬರ್ 17, 2022 ರಂದು ಐಕಿಯಾಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಮಾರ್ಚ್ 2023 ರಲ್ಲಿ ಸಂಗೀತಾ ಬೋಹ್ರಾ ಅವರು ಶಾಂತಿನಗರದಲ್ಲಿರುವ ಬೆಂಗಳೂರು ನಗರ ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.
ಅರ್ಜಿ ವಿಚಾರಣೆ ವೇಳೆ ಐಕಿಯಾ ಪರ ವಕೀಲರು, “ಈ ದೂರು ಸುಳ್ಳು, ಕ್ಷುಲ್ಲಕವಾಗಿದೆ. ಗ್ರಾಹಕರು ಬ್ಯಾಗ್‌ಗಳನ್ನು ಖರೀದಿಸಲು ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಒತ್ತಾಯವಿಲ್ಲ. ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಬ್ಯಾಗ್ ಮಾರಾಟದಲ್ಲಿ ಅನುಮಾನಾಸ್ಪದ ಏನೂ ಇಲ್ಲ” ಎಂದು ವಾದಿಸಿದರು.
ಬೆಂಗಳೂರು ಗ್ರಾಹಕರ ವೇದಿಕೆಯ ನ್ಯಾಯಾಧೀಶರು ಅಕ್ಟೋಬರ್ 4, 2023 ರಂದು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವರ್ತೂರು ಕೆರೆಗೆ ಸೇರುತ್ತಿರುವ ಕೊಳಚೆ ನೀರು; ಮೀನುಗಳ ಮಾರಣಹೋಮ
ತೀರ್ಪಿನಲ್ಲೇನಿದೆ?
“ಸರಕುಗಳನ್ನು ತಲುಪಿಸಬಹುದಾದ ಸ್ಥಳಕ್ಕೆ ತರಲು ಉಂಟಾದ ಎಲ್ಲ ರೀತಿಯ ವೆಚ್ಚಗಳನ್ನು ಮಾರಾಟಗಾರನ ಮೇಲೆ ಹಾಕಲಾಗುತ್ತದೆ. ಹಾಗಾಗಿ, ಐಕಿಯಾ ವಾದವು ಸ್ವೀಕಾರಕ್ಕೆ ಅರ್ಹವಲ್ಲ. ಕ್ಯಾರಿ ಬ್ಯಾಗ್ ಖರೀದಿಸುವುದು ಐಚ್ಛಿಕವಾಗಿದ್ದರೆ, ಗ್ರಾಹಕರು ಪ್ರತಿಯೊಂದು ವಸ್ತುವಿಗೂ ಬ್ಯಾಗ್‌ಗಳನ್ನು ತರುವಂತಿಲ್ಲ. ಈ ನಿಟ್ಟಿನಲ್ಲಿ ದೊಡ್ಡ ಶೋರೂಮ್‌ಗಳು ಮತ್ತು ಮಾಲ್‌ಗಳ ವರ್ತನೆ ತೀರಾ ಆಘಾತ ತರಿಸಿದೆ. ಐಕಿಯಾ ಸೇವಾ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸವನ್ನು ಮಾಡಿದೆ. ಹಾಗಾಗಿ, ಗ್ರಾಹಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು” ಎಂದು ಹೇಳಿದೆ.
“ಐಕಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಬ್ಯಾಗ್‌ಗಾಗಿ ಮಹಿಳೆಯಿಂದ ಸಂಗ್ರಹಿಸಿದ ₹20 ಅನ್ನು ಬಡ್ಡಿಯೊಂದಿಗೆ ಮರುಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಜತೆಗೆ ಗ್ರಾಹಕರಿಗೆ ಕಿರುಕುಳ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ ₹1,000 ಪಾವತಿಸಬೇಕು. ಆಕೆಯ ನ್ಯಾಯಾಲಯದ ವೆಚ್ಚಕ್ಕೆ ₹2,000 ನೀಡಬೇಕು. ನ್ಯಾಯಾಲಯದ ಆದೇಶದ ದಿನಾಂಕದಿಂದ 30 ದಿನಗಳಲ್ಲಿ ಎಲ್ಲ ಹಣವನ್ನು ಪಾವತಿಸಬೇಕು” ಎಂದು ಆದೇಶಿಸಿದೆ.